ಕುಂದಾನಗರಿಯಲ್ಲಿ ರಾರಾಜಿಸುತ್ತಿವೆ ರಾಜಕೀಯ ನಾಯಕರ ಕಟೌಟ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-0005

ಬೆಳಗಾವಿ, ಡಿ.9-ನಾಳೆಯಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಕಟೌಟ್‍ಗಳು ನಗರದಾದ್ಯಂತ ರಾರಾಜಿಸುತ್ತಿವೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿ ಹೊಳಿ, ಶಾಸಕ ಸತೀಶ್ ಜಾರಕಿ ಹೊಳಿ, ಸ್ಥಳೀಯ ಮುಖಂಡರು, ಶಾಸಕರು, ಬಿಜೆಪಿ ಮುಖಂಡರಿಗೆ ಸ್ವಾಗತ ಕೋರುವ ಕಟೌಟ್‍ಗಳು, ಸ್ವಾಗತ ಕಮಾನುಗಳು ಎಲ್ಲಾ ಮುಖ್ಯ ರಸ್ತೆಗಳಲ್ಲಿ ಕಂಗೊಳಿಸುತ್ತಿವೆ. ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯುವ ಅಧಿವೇಶನಕ್ಕೆ ಫ್ಲೆಕ್ಸ್, ಬ್ಯಾನರ್‍ಗಳ ಅಬ್ಬರ ಜೋರಾಗಿದೆ.

ಕಾಂಗ್ರೆಸ್-ಜೆಡಿಎಸ್ ಪಕ್ಷದ ಬ್ಯಾನರ್‍ಗಳು, ಕಟೌಟ್‍ಗಳು ಹೆಚ್ಚಾಗಿ ಕಂಡ ಬರುತ್ತಿವೆ. ರಸ್ತೆಯುದ್ದಕ್ಕೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆಳೆತ್ತರ ಕಟೌಟ್‍ಗಳು, ಸಿದ್ದರಾಮಯ್ಯನವರ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‍ಗಳು ರಾರಾಜಿಸುತ್ತಿವೆ.  ಸುವರ್ಣ ಸೌಧದ ಸುತ್ತ ಪ್ರತಿಭಟನೆ ನಡೆಸುವವರ ಫ್ಲೆಕ್ಸ್‍ಗಳು ಕೂಡ ಇವೆ.ಮತ್ತೊಂದೆಡೆ ಸಚಿವರು, ಶಾಸಕರಿಗೆ ಸ್ವಾಗತ ಕೋರುವ ಕಮಾನುಗಳನ್ನು ಕಟ್ಟಲಾಗಿದೆ.

ಒಟ್ಟಾರೆ ಕುಂದಾನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಸ್‍ನಿಲ್ದಾಣ, ಮುಖ್ಯರಸ್ತೆ, ವೃತ್ತಗಳು, ರೈಲ್ವೆ ನಿಲ್ದಾಣದಂತಹ ಪ್ರಮುಖ ಸ್ಥಳಗಳಲ್ಲಿ ಕೂಡ ಸ್ವಾಗತ ಕೋರುವ ಫ್ಲೆಕ್ಸ್‍ಗಳನ್ನು ಅಳವಡಿಸಲಾಗಿದೆ. ಸಾಲ ಮನ್ನಾ ಯೋಜನೆ, ರೈತ ಮಿತ್ರ, ಬಡವರ ಬಂಧು ಸೇರಿದಂತೆ ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಬಿಂಬಿಸುವಂತಹ ಕಟೌಟ್‍ಗಳನ್ನು ಕೂಡ ಹಾಕಲಾಗಿದೆ.

ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವುದರಿಂದ ಕಟೌಟ್‍ಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಮಿಂಚುತ್ತಿದ್ದಾರೆ. ಮತ್ತೆ ಕೆಲವು ಕಟೌಟ್‍ಗಳನ್ನು ಬೆಂಬಲಿಗರು ಪ್ರತ್ಯೇಕವಾಗಿ ಹಾಕಿದ್ದಾರೆ. ಒಟ್ಟಾರೆ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್‍ಗಳ ಸಂಭ್ರಮ ಜೋರಾಗಿದೆ.

Facebook Comments

Sri Raghav

Admin