ಬೆಳಗಾವಿ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತಾ ಬಿಜೆಪಿ..?

ಈ ಸುದ್ದಿಯನ್ನು ಶೇರ್ ಮಾಡಿ

Govt--0111

ಬೆಂಗಳೂರು, ಡಿ.9- ಕಾಂಗ್ರೆಸ್‍ನಲ್ಲಿರುವ ಅಸಮಾಧಾನದ ಲಾಭ ಪಡೆಯುವ ಸಲುವಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ, ಕ್ಷೇತ್ರಗಳ ಅನುದಾನ ಹಂಚಿಕೆ, ವರ್ಗಾವಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಪ್ರಮುಖವಾಗಿ ಸಂಪುಟ ವಿಸ್ತರಣೆ ವಿಳಂಬಕ್ಕಾಗಿ ಕಾಂಗ್ರೆಸ್‍ನ ಹಿರಿಯ ನಾಯಕರೂ ಅಸಮಾಧಾನಗೊಂಡಿದ್ದಾರೆ. 20ರಿಂದ 25 ಮಂದಿ ಕಾಂಗ್ರೆಸ್ ಶಾಸಕರು ಅಧಿವೇಶನದಿಂದ ದೂರ ಉಳಿಯಲಿದ್ದಾರೆ ಎಂಬ ವದಂತಿಗಳಿವೆ. ಈ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದರೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಬಹುದು ಎಂಬ ವಾದಗಳು ಹುಟ್ಟಿಕೊಂಡಿದ್ದು,  ಬಿಜೆಪಿ ನಾಯಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಒತ್ತಡಗಳು ಹೆಚ್ಚಾಗಿವೆ.

ಬಿಜೆಪಿ 2-3 ದಿನಗಳಲ್ಲಿ ಶಾಸಕಾಂಗ ಸಭೆ ಕರೆಯಲಿದ್ದು, ಅಲ್ಲಿ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹಿರಿಯ ನಾಯಕರು ಶಾಸಕರನ್ನು ಸಮಾಧಾನ ಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆಪರೇಷನ್ ಕಮಲದಿಂದಾಗಿ ಬಹಳಷ್ಟು ಶಾಸಕರು ಗೊಂದಲದಲ್ಲಿ ಸಿಲುಕಿದ್ದು, ಅತ್ತ ಬಿಜೆಪಿ-ಇತ್ತ ಕಾಂಗ್ರೆಸ್ ಎಂಬ ಡೋಲಾಯಮಾನ ಮನಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಆಕ್ರಮಣಕಾರಿ ನಿರ್ಧಾರ ತೆಗೆದುಕೊಂಡರೆ ಸರ್ಕಾರ ರಚಿಸಲು ಸೂಕ್ತ ವೇದಿಕೆ ಸೃಷ್ಟಿಸಲು ಸಾಧ್ಯವಿದೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು. ಅದಕ್ಕಾಗಿ ನೀವು ಸರ್ಕಾರ ಉರುಳಿಸಿದರೂ ಸರಿ, ಹೊಸ ಸರ್ಕಾರ ರಚಿಸಿದರೂ ಸರಿ ಎಲ್ಲಾ ರೀತಿಯ ಬೆಂಬಲವನ್ನು ಹೈಕಮಾಂಡ್ ನೀಡಲಿದೆ ಎಂದು ಬಿಜೆಪಿಯ ವರಿಷ್ಠ ನಾಯಕರು ರಾಜ್ಯ ನಾಯಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.  ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಒಂದು ವಾರ ಕಾಲ ಕೇರಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರ ರೂಪಿಸುತ್ತಿರುವ ಯಡಿಯೂರಪ್ಪ ಅವರಿಗೆ ಅವಿಶ್ವಾಸ ನಿರ್ಣಯ ಎಂಬ ಬ್ರಹ್ಮಾಸ್ತ್ರ ಕೈಗೊಳ್ಳುವಂತೆ ಆಪ್ತ ಶಾಸಕರು ಸಲಹೆ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ರಾಜ್ಯ ರಾಜಕಾರಣದಲ್ಲಿ ಭೂ ಕಂಪ ಸಂಭವಿಸಲಿದೆ ಎಂದು ಹೇಳಿದ್ದರು. ಬಿಜೆಪಿ ಶಾಸಕರ ಒತ್ತಾಯ ನೋಡಿದರೆ ಈ ಹಿನ್ನೆಲೆಯಲ್ಲಿಯೇ ಜಾವಡೇಕರ್ ಹೇಳಿಕೆ ನೀಡಿದ್ದರೆ ಎಂಬ ಅನುಮಾನ ಕಾಡಲಾರಂಭಿಸಿದೆ.  ಬಿಜೆಪಿ ಎಷ್ಟೆಲ್ಲಾ ಸರ್ಕಸ್ ಮಾಡಿದರೂ ಅದಕ್ಕೆ ಅವಕಾಶ ಕೊಡದಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳೂ ಕೂಡ ಪ್ರತಿ ತಂತ್ರ ಹೆಣೆಯುತ್ತಲೇ ಬಂದಿವೆ. ಒಂದು ವೇಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾದರೆ ಅದನ್ನು ಸಮರ್ಥವಾಗಿ ಎದುರಿಸಲು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಸಿದ್ಧತೆ ನಡೆಸುತ್ತಿದೆ.

Facebook Comments

Sri Raghav

Admin