ರಾಮಮಂದಿರಕ್ಕಾಗಿ ದೆಹಲಿಯಲ್ಲಿ ವಿಎಚ್‍ಪಿ ಬೃಹತ್ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

VHP-01

ನವದೆಹಲಿ, ಡಿ.9- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಾಗಬೇಕೆಂಬ ಬಿಗಿಪಟ್ಟನ್ನು ಮುಂದುವರಿಸಿರುವ ವಿಶ್ವ ಹಿಂದೂ ಪರಿಷತ್ ಇಂದು ದೆಹಲಿಯಲ್ಲಿ ಆಯೋಜಿಸಿದ್ದ ಬೃಹತ್ ರ್ಯಾಲಿಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ಇದರೊಂದಿಗೆ ರಾಮಮಂದಿರ ನಿರ್ಮಾಣದ ದೊಡ್ಡಮಟ್ಟದ ಕೂಗು ರಾಜಧಾನಿ ದೆಹಲಿಯಲ್ಲೂ ಪ್ರತಿಧ್ವನಿಸಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿಂದು ವಿಎಚ್‍ಪಿ ಆಯೋಜಿಸಿದ್ದ ರ್ಯಾಲಿಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಸಹಸ್ರಾರು ಕಾರ್ಯಕರ್ತರು ಮತ್ತು ರಾಮಭಕ್ತರು ಭಾಗವಹಿಸಿ ರಾಮಮಂದಿರ ನಿರ್ಮಾಣದ ಘೋಷಣೆಯನ್ನು ಮೊಳಗಿಸಿದರು.  ಇತ್ತೀಚೆಗೆ ಅಯೋಧ್ಯೆಯಲ್ಲಿ ಧರ್ಮಸಂಸತ್ ಸಭೆಗಳನ್ನು ನಡೆಸಿದ್ದ ವಿಎಚ್‍ಪಿ ಇಂದು ತನ್ನ ಆಂದೋಲನವನ್ನು ದೆಹಲಿಯಲ್ಲಿ ಆಯೋಜಿಸಿ ಶಕ್ತಿ ಪ್ರದರ್ಶಿಸಿತು.

ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿಎಚ್‍ಪಿ, ಭಜರಂಗದಳ, ಆರ್‍ಎಸ್‍ಎಸ್ ಸೇರಿದಂತೆ ವಿವಿಧ ಹಿಂದೂಪರ ಕಾರ್ಯಕರ್ತರು, ಸಹಸ್ರಾರು ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಒಕ್ಕೊರಲಿನ ಬೇಡಿಕೆ ಹೂಂಕರಿಸಿ ದರು.ವಿಎಚ್‍ಪಿ ರ್ಯಾಲಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಇಂದು ಬೆಳಗ್ಗಿನಿಂದಲೇ ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಿ ನಾಗರಿಕರು ಪರದಾಡುವಂತಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ರಾಜಧಾನಿಯಾದ್ಯಂತ ವ್ಯಾಪಕ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಇಂದು ಅಪರಾಹ್ನ ನಡೆಯುವ ಬೃಹತ್ ರ್ಯಾಲಿಯಲ್ಲಿ ಆರ್‍ಎಸ್‍ಎಸ್ ಕಾರ್ಯಕಾರಿ ಮುಖ್ಯಸ್ಥ ಸುರೇಶ್ ಭಯ್ಯಾಜಿ ಜೋಷಿ, ವಿಎಚ್‍ಪಿ ಅಧ್ಯಕ್ಷ ವಿಷ್ಣು ಸದಾಶಿವ್ ಕೋಕ್‍ಜೆ, ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‍ಕುಮಾರ್ ಸೇರಿದಂತೆ ಅನೇಕ ಮುಖಂಡರು ಭಾಷಣ ಮಾಡಲಿದ್ದಾರೆ.

Facebook Comments

Sri Raghav

Admin