ಪರಿಷತ್ ಸಭಾಪತಿ ಆಯ್ಕೆ ವಿಷಯದಲ್ಲಿ ದೋಸ್ತಿ ನಡುವೆ ಹಗ್ಗ ಜಗ್ಗಾಟ

ಈ ಸುದ್ದಿಯನ್ನು ಶೇರ್ ಮಾಡಿ

Horatti--01

ಬೆಂಗಳೂರು, ಡಿ.9-ವಿಧಾನಪರಿಷತ್ ಸಭಾಪತಿ ಆಯ್ಕೆ ವಿಷಯದಲ್ಲಿ ದೋಸ್ತಿ ಪಕ್ಷಗಳ ನಡುವೆ ಹಗ್ಗಾಜಗ್ಗಾಟ ಮುಂದುವರೆದಿದ್ದು, ಜೆಡಿಎಸ್‍ನ ಒತ್ತಡಕ್ಕೆ ಮಣಿಯದೆ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದೆ. ಹಾಲಿ ಹಂಗಾಮಿ ಸಭಾಪತಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ ಹೊರಟ್ಟಿ ಅವರನ್ನು ಮುಂದುವರೆಸಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದ್ದು, ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ಗಾಂಧಿ ಜೊತೆ ಚರ್ಚೆ ಮಾಡಿ ತನ್ನ ಹಠ ಸಾಧಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಇದರಿಂದ ಸಿಟ್ಟಿಗೆದ್ದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರುಗಳು ಕಾಂಗ್ರೆಸ್‍ನಿಂದ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸೂಚ್ಯವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಭಾಪತಿ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸುತ್ತಾರೋ ಅವರು ಆಯ್ಕೆಯಾಗುತ್ತಾರೆ ಎಂದು ಹೇಳಿದ್ದಾರೆ. ಬಸವರಾಜ ಹೊರಟ್ಟಿ ಅವರಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಭಾಪತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ದೇವೇಗೌಡರ ನಿರ್ದೇಶನದಂತೆ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಸ್ಪರ್ಧಿಸುವ ಪ್ರಸ್ತಾವದ ಸೂಚನಾ ಪತ್ರವನ್ನು ವಿಧಾನಪರಿಷತ್‍ನ ಕಾರ್ಯದರ್ಶಿಗೆ ಸಲ್ಲಿಸಲಾಗುತ್ತದೆ. ಅತ್ತ ಎಸ್.ಆರ್.ಪಾಟೀಲ್ ಕೂಡ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.  ಡಿ.12 ರಂದು ಚುನಾವಣೆ ನಡೆಯಲಿದ್ದು, ಬುಧವಾರ ಮಧ್ಯಾಹ್ನ 12 ಗಂಟೆಯೊಳಗಾಗಿ ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವವರ ಸೂಚನಾ ಪತ್ರವನ್ನು ಸಲ್ಲಿಸಬೇಕಾಗಿದೆ.  ವಿಧಾನಪರಿಷತ್‍ನಲ್ಲಿ ಖಾಲಿ ಇರುವ ಸಭಾಪತಿ ಮತ್ತು ವಿಧಾನಪರಿಷತ್‍ನ ಮುಖ್ಯ ಸಚೇತಕ ಸ್ಥಾನವನ್ನು ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಹಂಚಿಕೆ ಮಾಡಿಕೊಳ್ಳಲು ಮುಂದಾಗಿದ್ದವು. ಆದರೆ ಸಭಾಪತಿ ಸ್ಥಾನ ತಮ್ಮ ಆಪ್ತರಾದ ಎಸ್.ಆರ್. ಪಾಟೀಲ್ ಅವರಿಗೆ ದಕ್ಕಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಆದರೆ ಈ ಬೇಡಿಕೆಯನ್ನು ಒಪ್ಪದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಸವರಾಜ ಹೊರಟ್ಟಿ ಅವರನ್ನು ಮುಂದುವರೆಸುವುದು ಸೂಕ್ತ ಎಂದು ಸಮನ್ವಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಹಮತ ಸೂಚಿಸಿಲ್ಲ. ಕೊನೆಗೆ ಜೆಡಿಎಸ್ ವರಿಷ್ಠರು ನೇರವಾಗಿ ರಾಹುಲ್‍ಗಾಂಧಿಯವರೊಂದಿಗೆ ಮಾತನಾಡಿ ಸಭಾಪತಿ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನು ಇನ್ನಷ್ಟು ಕೆರಳಿಸಿದ್ದು, ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಶತಾಯ ಗತಾಯ ಜೆಡಿಎಸ್‍ಗೆ ತಿರುಗೇಟು ನೀಡಿ ಸಭಾಪತಿ ಸ್ಥಾನವನ್ನು ದಕ್ಕಿಸಿಕೊಳ್ಳಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ದಿನೇಶ್ ಗುಂಡೂರಾವ್ ಕೂಡ ಕೊಪ್ಪಳ, ಮಂಗಳೂರು ಜಿಲ್ಲಾ ಪ್ರವಾಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೇ ಎಲ್ಲಾ ಕಾಂಗ್ರೆಸ್ ಎಂಎಲ್‍ಸಿಗಳಿಗೂ ಸೂಚನೆ ರವಾನೆಯಾಗಿದ್ದು, ಎಸ್.ಆರ್. ಪಾಟೀಲ್ ಅವರನ್ನು ಗೆಲ್ಲಿಸಿಕೊಳ್ಳುವಂತೆ ತಾಕೀತು ಮಾಡಲಾಗಿದೆ.

ಸಂಖ್ಯಾ ಬಲದಲ್ಲಿ ಕಾಂಗ್ರೆಸ್ 38 ಸದಸ್ಯರನ್ನು ಹೊಂದಿದೆ. ಜೆಡಿಎಸ್, ಬಿಜೆಪಿ, ಪಕ್ಷೇತರರನ್ನು ಒಳಗೊಂಡರೂ ಸದಸ್ಯರ ಸಂಖ್ಯೆ 38 ದಾಟುವುದಿಲ್ಲ. ಚುನಾವಣೆ ನಡೆದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ. ಹೀಗಾಗಿ ಸಿದ್ದರಾಮಯ್ಯ ಅವರು ದೋಸ್ತಿ ಪಕ್ಷಕ್ಕೆ ಲೈಟ್ ಶಾಕ್ ನೀಡಲು ವಿಧಾನಸಭಾಪತಿ ಚುನಾವಣೆಯನ್ನೇ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

# ಮೇಲ್ಮನೆ ಸದಸ್ಯರ ಬಲಾಬಲ ಈ ರೀತಿ ಇದೆ:
ವಿಧಾನಪರಿಷತ್‍ನ ಒಟ್ಟು 75 ಸ್ಥಾನಗಳ ಪೈಕಿ ಕಾಂಗ್ರೆಸ್-38, ಜೆಡಿಎಸ್-14, ಬಿಜೆಪಿ-18, ಪಕ್ಷೇತರರು -2 ಸದಸ್ಯರಿದ್ದು, 2 ಸ್ಥಾನ ಖಾಲಿ ಉಳಿದಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ 54 ಸದಸ್ಯರ ಬಲದೊಂದಿಗೆ ಸಭಾಪತಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Facebook Comments

Sri Raghav

Admin