ಬೆಂಗಳೂರಲ್ಲೊಂದು ಬಿಗ್ ರಾಬರಿ, 24 ಲಕ್ಷ ಹಣವಿದ್ದ ಬ್ಯಾಗ್ ಕಸಿದು ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

bag--01

ಬೆಂಗಳೂರು, ಡಿ.11- ನಗರದ ವಿವಿಧ ಕಡೆ ಹಣ ಸಂಗ್ರಹಿಸಿ ಎಟಿಎಂಗಳಿಗೆ ಹಣ ತುಂಬುವ ಕಚೇರಿಗೆ ಬೈಕ್‍ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 24 ಲಕ್ಷ ರೂ. ಹಣವನ್ನು ದರೋಡೆ ಮಾಡಿರುವ ಘಟನೆ ರಾತ್ರಿ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಂಗಡಿ ಹಾಗೂ ಇನ್ನಿತರ ಸಂಸ್ಥೆಗಳಿಂದ ಹಣ ಸಂಗ್ರಹಿಸಿಕೊಂಡು ಬೈಕ್‍ನಲ್ಲಿ ಹೋಗುತ್ತಿದ್ದ ಇಬ್ಬರು ನೌಕರರನ್ನು ಆರು ಮಂದಿ ಡಕಾಯಿತರು ಮೂರು ಬೈಕ್‍ಗಳಲ್ಲಿ ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿ 24 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.

ವಿಲ್ಸನ್‍ಗಾರ್ಡನ್‍ನ 7ನೆ ಕ್ರಾಸ್‍ನಲ್ಲಿ ಎಟಿಎಂಗೆ ಹಣ ತುಂಬುವ ರೈಟರ್ ಸೇಫ್‍ಗಾರ್ಡ್ ಎಂಬ ಕಂಪೆನಿ ಇದ್ದು, ಈ ಕಂಪೆನಿ ನೌಕರರು ನಗರದ ವಿವಿಧ ಕಡೆ ಅಂಗಡಿ ಹಾಗೂ ಇನ್ನಿತರ ಸಂಸ್ಥೆಗಳಿಂದ ಹಣ ಸಂಗ್ರಹಿಸಿಕೊಂಡು ಬಂದು ಕಂಪೆನಿಗೆ ಕೊಡುತ್ತಾರೆ. ಈ ಹಣವನ್ನು ಕಂಪೆನಿಯು ಎಟಿಎಂಗಳಿಗೆ ಹಾಕುತ್ತದೆ. ಈ ಕಂಪೆನಿಯಲ್ಲಿ ನೂರಾರು ನೌಕರರು ಕೆಲಸ ಮಾಡುತ್ತಿದ್ದು, ಪ್ರತಿನಿತ್ಯ ಹಣ ಸಂಗ್ರಹ ಮಾಡಿಕೊಂಡು ಬರುತ್ತಾರೆ. ಅದರಂತೆ ನಿನ್ನೆ ನೌಕರರಾದ ದೇವೇಂದ್ರ ಮತ್ತು ಮಂಜುನಾಥ್ ಎಂಬುವವರು ಕೆಎಸ್ ಗಾರ್ಡನ್, ರಾಜಾಜಿನಗರ, ಕೆಜಿ ಹಳ್ಳಿ ಇನ್ನಿತರೆಡೆ ಹಣ ಸಂಗ್ರಹಿಸಿಕೊಂಡು ಬೈಕ್‍ನಲ್ಲಿ ಕಂಪೆನಿಗೆ ವಾಪಸಾಗುತ್ತಿದ್ದರು.

ರಾತ್ರಿ 10.15ರಲ್ಲಿ ವಿಲ್ಸನ್‍ಗಾರ್ಡನ್‍ನ 7ನೆ ಕ್ರಾಸ್, ಕೆಎಸ್‌ಆರ್‌ಟಿಸಿ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮೂರು ಬೈಕ್‍ಗಳಲ್ಲಿ ಆರು ಮಂದಿ ಡಕಾಯಿತರು ಈ ಇಬ್ಬರು ನೌಕರರನ್ನು ಹಿಂಬಾಲಿಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆಸಿ ಬೀಳಿಸಿದ್ದಾರೆ.

ನೌಕರರಿಗೆ ಹೆಲ್ಮೆಟ್ ಹಾಗೂ ರಾಡಿನಿಂದ ಹಲ್ಲೆ ಮಾಡಿ 24 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಕಸಿದುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಈ ಸಂಬಂಧ ನೌಕರ ದೇವೇಂದ್ರ ವಿಲ್ಸನ್ ಗಾರ್ಡನ್ ಪೊಲೀಸರಿಗೆ ದೂರು ನೀಡಿದ್ದಾರೆ. ದರೋಡೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments