ಕಾಲೇಜುಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ವಿಚಾರಕ್ಕೆ ವಿಧಾನಸಭೆಯಲ್ಲಿ ಗದ್ದಲ

ಈ ಸುದ್ದಿಯನ್ನು ಶೇರ್ ಮಾಡಿ

Session-Assembly

ಬೆಳಗಾವಿ(ಸುವರ್ಣಸೌಧ), ಡಿ.11- ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರ ಆಕ್ರೋಶ ಭರಿತ ಮಾತುಗಳು ಇಂದು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ ಘಟನೆ ನಡೆಯಿತು.ಪ್ರಶ್ನೋತ್ತರ ಅವಧಿಯಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ 5568 ಬೋಧಕ, 3957ಬೋಧಕೇತರ ಹುದ್ದೆಗಳು 2009ರಿಂದಲೂ ಖಾಲಿ ಇವೆ. ಸುಮಾರು 20 ವರ್ಷಗಳಿಂದಲೂ ಇದನ್ನು ತುಂಬಿಲ್ಲ.ಇಲಾಖೆಯನ್ನು ಕತ್ತೆ ಕಾಯಲು ನಡೆಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನೇ ಒಂದು ಕಾಲೇಜಿನ ಮಂಡಳಿ ಅಧ್ಯಕ್ಷನಾಗಿದ್ದೇನೆ. ಇಲಾಖೆ ಮೊದಲು ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡಿತ್ತು. ಜಾಹೀರಾತು ನೀಡಿ ಅಭ್ಯರ್ಥಿಗಳನ್ನು ಕರೆದು ಸಂದರ್ಶನ ಮಾಡಿ ನೇಮಕಾತಿ ನಡೆಸುವ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ ಕೊರತೆ ಇದೆ ಎಂದು ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಹೀಗಾಗಿ ಆಡಳಿತ ಮಂಡಳಿಯವರು ಜನಸಾಮಾನ್ಯರ ಮುಂದೆ ಪೊಳ್ಳಾಗಿದ್ದಾರೆ ಎಂದು ಸಿಟ್ಟಿನಿಂದ ಮಾತನಾಡಿದರು. ಪ್ರಭಾವ ಇರುವ ದೊಡ್ಡವರ ಕಾಲೇಜುಗಳ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅವಕಾಶ ನೀಡುತ್ತಾರೆ. ಸಣ್ಣಪುಟ್ಟವರಿಗೆ ತಾರತಮ್ಯ ಮಾಡಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿದರು.

ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, 2015ರವರೆಗೂ ಖಾಲಿ ಇದ್ದ ಹುದ್ದೆಗಳನ್ನು 2017ರಲ್ಲಿ ಭರ್ತಿ ಮಾಡಲಾಗಿದೆ. ಬಾಕಿ ಹುದ್ದೆಗಳ ಭರ್ತಿಗೆ ತಿದ್ದುಪಡಿ ಮಾಡಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಮಾಧುಸ್ವಾಮಿ ಅವರು, ಶಿಕ್ಷಕರಿಲ್ಲದೇ ಇದ್ದರೆ ಪಾಠ ಮಾಡಿಸುವುದು ಹೇಗೆ ? ಬಿಎ ಅಂಥ ಕೋರ್ಸ್‍ಗಳಿಗೆ ನಾವೇ ಶುಲ್ಕ ಕಟ್ಟಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುತ್ತೇವೆ. ಶಿಕ್ಷಕರಿಗೂ ವೇತನ ನೀಡಬೇಕು ಎಂದರೆ ಸಾಧ್ಯವೆ ? ಅನುದಾನಿತ ಕಾಲೇಜುಗಳನ್ನು ಸರ್ಕಾರವೇ ವಶಕ್ಕೆ ತೆಗೆದುಕೊಳ್ಳಲಿ. ಖಾಲಿ ಹುದ್ದೆಯ ನೇಮಕಾತಿಯ ಪ್ರಸ್ತಾವನೆಯನ್ನು ಇಲಾಖೆಗೆ ಕೊಟ್ಟರೆ ಅಧಿಕಾರಿಗಳು ಅದನ್ನು ತೆಗೆದು ಬಿಸಾಕುತ್ತಾರೆ ಎಂದು ಹೇಳಿದರು. ಸಚಿವ ಜಿ.ಟಿ.ದೇವೇಗೌಡ ಅವರು ಈ ವಿಷಯದ ಬಗ್ಗೆ ಚರ್ಚೆ ಮಾಡಲು ಇಂದು ಬೆಳಗ್ಗೆ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ನಿಮ್ಮನ್ನೂ ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ ಸಂಪರ್ಕಕ್ಕೆ ಸಿಗಲಿಲ್ಲ. ಸಮಸ್ಯೆ ಬಗೆಹರಿಸುತ್ತೇನೆ ಎಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್, ಇದು ಗಂಭೀರವಾದ ವಿಷಯ. ಪ್ರಶ್ನೆ ತಡೆಹಿಡಿಯುತ್ತೇನೆ. ಸಚಿವರು ಮತ್ತು ಶಾಸಕರು ಕುಳಿತು ಚರ್ಚಿಸಿ ಅಧಿವೇಶನ ಮುಗಿಯುವುದೊರಳಗೆ ಸಮರ್ಪಕ ಉತ್ತರ ಸಿಗುವಂತೆ ಮಾಡುತ್ತೇನೆ ಎಂದರು. ಚರ್ಚೆಯ ಹಂತದಲ್ಲೇ ಮಧ್ಯೆ ಎದ್ದು ನಿಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ. ಬಿಜೆಪಿಯವರು ಐದು ವರ್ಷ ಆಡಳಿತ ನಡೆಸಿದ್ದಾರೆ. ಮೊದಲಿಂದಲೂ ಇರುವ ಸಮಸ್ಯೆಗಳನ್ನು ಈಗ ಅಧಿಕಾರಕ್ಕೆ ಬಂದಿರುವ ನಾವು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಶಾಸಕರ ಮಾತಿನಲ್ಲಿ ಗಾಂಭಿರ್ಯತೆ ಇರಬೇಕೆಂದು ಖಾರವಾಗಿ ಪ್ರತಿಕ್ರಿಯಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಮಾಧುಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಪ್ರತಿ ವಾಗ್ದಾಳಿ ನಡೆಸಿದ್ದರಿಂದ ಗದ್ದಲವಾಗಿ, ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾಧುಸ್ವಾಮಿ ಅವರ ಆಕ್ಷೇಪದ ಮಾತುಗಳನ್ನು ಕಡತದಿಂದ ತೆಗೆದು ಹಾಕಬೇಕೆಂದು ಆಡಳಿತ ಪಕ್ಷದವರು ಆಗ್ರಹಿಸಿದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಮಾತನಾಡಿದ ಸಿಎಂ, ಶಾಸಕರು ಹೇಳಬೇಕಾಗಿದ್ದನ್ನು ಹೇಳಿದ್ದಾಗಿದೆ. ಸಮಸ್ಯೆ ಪರಿಹಾರಕ್ಕೆ ನಾವು ಸಿದ್ದ. ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ. ಸರ್ಕಾರದ ಖಜಾನೆ ಆರೂವರೆ ಕೋಟಿ ಜನರಿಗೆ ಸೇರಿದ್ದು, ಅದನ್ನು ಭರ್ತಿ ಮಾಡಿ ಕೆಲಸ ಮಾಡಲು ಜನ ನಮಗೆ ಶಕ್ತಿ ನೀಡಿದ್ದಾರೆ. ಶಾಸಕರು ಮಾತನಾಡುವಾಗ ಕತ್ತೆಕಾಯಲು ಬಂದಿದ್ದಾರೆ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.

ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಖಾಸಗಿ ಆಡಳಿತ ಮಂಡಳಿಯವರು ಏನೆಲ್ಲಾ ಮಾಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಈ ವಿಷಯದ ಚರ್ಚೆಗೆ ಅರ್ಧಗಂಟೆ ಸಮಯ ಕೊಡಿ ವಾಸ್ತವತೆ ಏನೆಂದು ನಾವು ವಿವರಿಸುತ್ತೇವೆ ಎಂದರು. ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಚರ್ಚೆಯಾಗಬೇಕಾದ ವಿಷಯ ಮುಗಿಯಿತು. ದೊಡ್ಡವರೇ ಮಾತನಾಡಿ ಗಲಾಟೆ ಮಾಡುವುದು ಸರಿಯಲ್ಲ. ವಿದೇಶಕ್ಕೆ ಹೋಗಿರುವ ಸಿದ್ದರಾಮಯ್ಯ ಅವರು ಬಂದ ಮೇಲೆ ಸಂಪುಟ ವಿಸ್ತರಣೆ ಮಾಡಿ ಮುಗಿಸಿಬಿಡಿ. ಸಚಿವ ಸ್ಥಾನದ ಆಕಾಂಕ್ಷಿಗಳು ಕೂಗಾಡುವುದಕ್ಕೆ ಬ್ರೇಕ್ ಹಾಕಿ ಎಂದು ಮಾರ್ಮಿಕವಾಗಿ ನುಡಿದರು. ನನಗೂ ಬೆಲ್ ಹೊಡೆದು ಎಚ್ಚರಿಕೆ ನೀಡಲು ಬರುತ್ತದೆ. ನಾನೇ ಎದ್ದು ನಿಂತು ಸದನವನ್ನು ನಿಯಂತ್ರಿಸುವುದೂ ಗೊತ್ತಿದೆ. ನೀವು ಸುಸ್ತಾಗಲಿ ಎಂದು ಸುಮ್ಮನಿರುತ್ತೇನೆ ಎಂದು ಹೇಳಿದರು.

Facebook Comments

Sri Raghav

Admin