ಯಾವ ಮುಲಾಜಿಗೆ ಒಳಗಾಗದೆ ಡ್ಯೂಟಿ ಮಾಡಿ : ಪೊಲೀಸರಿಗೆ ಡಿಸಿಎಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಳಗಾವಿ ,ಡಿ.12- ಯಾವ ಮುಲಾಜಿಗೂ ಒಳಗಾಗದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಪೊಲೀಸರಿಗೆ ಸೂಚನೆ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಪರಮೇಶ್ವರ್, ಪೊಲೀಸರಿಗೆ ಕಾನೂನೇ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ನಿರ್ದೇಶನ ನೀಡಲಾಗುವುದು. ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರೇ ಅಧ್ಯಕ್ಷತೆ ವಹಿಸಬೇಕು. ಶಾಸಕರು ಹೇಳಿದಂತೆ ಅಲ್ಲಿ ನಡೆದ ಘಟನಾವಳಿ ಬಗ್ಗೆ ವಿಡಿಯೋಗ್ರಾಫ್ ತರಿಸಿ ಪರಿಶೀಲಿಸಿ ತಪ್ಪಾಗಿದ್ದರೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್, ಕಾರ್ಯಕ್ರಮ ನಡೆಯುವಾಗ ಘೋಷಣೆ ಕೂಗುವುದು, ಫ್ಲೆಕ್ಸ್ ಹಾಕುವುದು ಸಾಮಾನ್ಯವಾಗಿ ನಡೆಯುತ್ತದೆ. ಈ ಚುನಾಯಿತ ಪ್ರತಿನಿಧಿಗಳಿಗೆ ಗೌರವ ಕೊಡಬೇಕೇ ಹೊರತು ಸಣ್ಣವರಾಗಬಾರದು. ಪೊಲೀಸ್ ಅಧಿಕಾರಿಗಳು ಆಡಳಿತ ಪಕ್ಷದವರಿಗೆ ಲಾಯಲ್ ಆಗಿರುತ್ತಾರೆ ಎಂದಾಗ, ಉಪಮುಖ್ಯಮಂತ್ರಿ ಮೇಲಿನಂತೆ ಪ್ರತಿಕ್ರಿಯಿಸಿದರು.

ಇದಕ್ಕೂ ಮುನ್ನ ಮಾತನಾಡಿದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್, ಸರ್ಕಾರಿ ಕಾರ್ಯಕ್ರಮಗಳು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಕಡೆ ಘೋಷಣೆ ಕೂಗಲಾಯಿತು. ಆ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಸಣ್ಣ ವಿಚಾರ ದೊಡ್ಡದು ಮಾಡುವುದು ಬೇಡ ಎಂದು ಹೇಳಿದ್ದ ಬಿಜೆಪಿ ಶಾಸಕರನ್ನು ಕೆರಳಿಸಿತು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ರಾಜೇಶ್ ನಾಯಕ್, ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವರ ಸಮ್ಮುಖದಲ್ಲೆ ತಮ್ಮನ್ನು ತಡೆಯುವ ಪ್ರಯತ್ನ ಹಾಗೂ ಗೂಂಡಾಗಿರಿ ವರ್ತನೆ ಮಾಡಲಾಗಿದೆ ಎಂದರು.

Facebook Comments