ಅಧಿವೇಶನ ಮುಗಿಯುತ್ತಿದ್ದಂತೆ ಜೆಡಿಎಸ್ ಪದಾಧಿಕಾರಿಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Jdsಬೆಳಗಾವಿ,ಡಿ.12-ಅಧಿವೇಶನ ಮುಗಿಯುತ್ತಿದ್ದಂತೆ ಜೆಡಿಎಸ್ ಪದಾಧಿಕಾರಿಗಳ ಪುನಾರಚನೆ ಮಾಡಲಿದೆ. ಪಕ್ಷದ ಜಿಲ್ಲಾಧ್ಯಕ್ಷರ ಬದಲಾವಣೆ ಸೇರಿದಂತೆ ನಾಲ್ಕು ಕಂದಾಯ ವಿಭಾಗಗಳಿಗೆ ಕಾರ್ಯಾಧ್ಯಕ್ಷರು, ವಿವಿಧ ವಿಭಾಗಗಳಿಗೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಂತದ ಪದಾಧಿಕಾರಿಗಳನ್ನು ನೇಮಕ ಮಾಡಲಿದೆ. ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ಕಾರ್ಯ ನಿರ್ವಹಿಸುವವರಿಗೆ ಮಣೆ ಹಾಕಲು ನಿರ್ಧರಿಸಲಾಗಿದ್ದು, ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸಮಾಲೋಚನೆ ನಡೆಸಿದ್ದಾರೆ.

ನಾಲ್ಕು ಕಂದಾಯ ವಿಭಾಗಗಳಿಗೆ ಕಾರ್ಯಾಧ್ಯಕ್ಷರನ್ನು ನೇಮಿಸುವ ಬಗ್ಗೆಯೂ ಚಿಂತನೆ ನಡೆದಿದ್ದು, ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಸಜ್ಜುಗೊಳಿಸಲಾಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನಾದೇಶ ಬಂದಿರುವುದು ಹಾಗೂ ರಾಜ್ಯದ ಉಪಚುನಾವಣೆಯಲ್ಲಿ ಮೈತ್ರಿ ಪರ ಜನಾದೇಶ ಸಿಕ್ಕಿರುವುದರಿಂದ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್ ಜೊತೆಗೂಡಿ ಎದುರಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ.

ಈಗಿನಿಂದಲೇ ಪಕ್ಷ ಸಂಘಟನೆ ಜೊತೆಗೆ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಸಾಲಮನ್ನಾ, ಬಡವರ ಬಂಧು ಮುಂತಾದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಸೇರಿದಂತೆ ಸಂಘಟನೆ ಕುರಿತಂತೆ ಚರ್ಚೆ ನಡೆದಿದೆ.

Facebook Comments