ಕೊಡಗಿನಲ್ಲಿ ಮನೆ ಕಟ್ಟಲು ಅನುಮತಿ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Kodaguಬೆಳಗಾವಿ (ಸುವರ್ಣಸೌಧ), ಡಿ.12- ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಕೊಚ್ಚಿ ಹೋಗಿರುವ ಪ್ರದೇಶಗಳಲ್ಲಿ ಮತ್ತೆ ಮನೆ ನಿರ್ಮಿಸಿಕೊಳ್ಳಬೇಕಾದರೆ ಹೊಸ ಲೇಔಟ್‍ಗಳಿಗೆ ಅನುಮತಿ ಪಡೆಯಬೇಕೆಂದು ಅಧಿಕಾರಿಗಳು ಷರತ್ತು ವಿಧಿಸಿರುವ ಮಾಹಿತಿ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಬಹುತೇಕ ಮನೆಗಳು ಕೊಚ್ಚಿ ಹೋಗಿವೆ. ಆದರೆ, ಅಲ್ಲಿ ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಮುಂದಾದವರಿಗೆ ಭೂ ಪರಿವರ್ತನೆ ನಿಯಮಗಳನ್ನು ಪಾಲಿಸಬೇಕು.

ಸ್ಥಳೀಯ ನಗರಾಭಿವೃದ್ಧಿ ಪ್ರೊಧಿಕಾರದಿಂದ ಬಡಾವಣೆಯ ಭೂ ಪರಿವರ್ತನಾ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಲಾಗುತ್ತಿದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ವಿಧಾನಸಭೆಯ ಗಮನಕ್ಕೆ ತಂದರು. ಇದು ಸ್ಪೀಕರ್ ರಮೇಶ್‍ಕುಮಾರ್ ಅವರ ಅಚ್ಚರಿಗೂ ಕಾರಣವಾಯಿತು. ಪ್ರಶ್ನೋತ್ತರ ಅವಧಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಅವರು ಪ್ರಶ್ನೆ ಕೇಳಿ ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು.

ಇಲ್ಲವಾದರೆ ಅಂತಹ ನಿವೇಶನ ಅಥವಾ ಮನೆಗಳ ಖಾತೆಗಳನ್ನು ದಾಖಲು ಮಾಡುವುದಿಲ್ಲ. ಆಸ್ತಿ ಜವಾಬ್ದಾರಿ ವರ್ಗಾವಣೆಗಳನ್ನು ಅಂಗೀ ಕರಿಸಲಾಗುತ್ತಿಲ್ಲ ಎಂದು ಹೇಳಲಾಗಿದೆ. ಇತ್ತೀಚೆಗೆ ಈ ಎಲ್ಲಾ ಕೆಲಸಗಳು ನಿಂತು ಹೋಗಿವೆ. ಈ ಮೊದಲು ತಹಸೀಲ್ದಾರ್ ಅವರು ಭೂ ಪರಿವರ್ತನೆಗೆ ಅನುಮತಿ ನೀಡುತ್ತಿದ್ದರು.
ಈಗ ಮತ್ತೆ ನಗರಾಭಿವೃದ್ಧಿ ಪ್ರಾಧಿಕಾರ ದಿಂದಲೇ ಅನುಮತಿ ಪಡೆಯ ಬೇಕು ಎಂಬ ನಿಯಮ ವಿಧಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು, 2017ರ ಮಾರ್ಚ್ 22ರಂದು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಸೂಚನೆ ನೀಡಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಇರುವ ನಿವೇಶನಗಳಿಗೆ ಖಾತೆ ನೀಡಬಾರದು ಎಂಬ ಆದೇಶ ನೀಡಲಾಗಿದೆ. 2017ರ ಡಿ.26ರಂದು ಉಪ ಲೋಕಾಯುಕ್ತರು ರಾಮನಗರ ನಗರಸಭೆಯಲ್ಲಿ ನಡೆಸಿದ ವಿಚಾರಣೆ ವೇಳೆ 1909 ನಿಯಮ ಬಾಹಿರ ಖಾತೆಗಳು ಪತ್ತೆಯಾಗಿವೆ. ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳಲ್ಲೂ ಇದೇ ರೀತಿ ಇರಬಹುದು ಎಂಬ ಅಭಿಪ್ರಾಯ ದಿಂದ ಎಲ್ಲಾ ಪೌರಾಡಳಿತ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 2013ರ ಅ.19ರ ಮುಂಚಿತವಾಗಿ ಬಂದಿರುವ ಅನಧಿಕೃತ ಬೆಳವಣಿಗೆಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಲು ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಿವರಣೆ ನೀಡಿದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬೋಪಯ್ಯ ಅವರು ಕೊಡುಗಿನ ವಿಚಾರ ವನ್ನು ಸಭೆಯ ಗಮನಕ್ಕೆ ತಂದರು. ರಾಮನಗರದಲ್ಲಿ ಭೂಮಾಫಿಯ ಮಾಡಿದ ತಪ್ಪಿಗೆ ರಾಜ್ಯದ ಇತರೆ ಭಾಗಗಳ ಜನರಿಗೆ ಶಿಕ್ಷೆ ಏಕೆ ಎಂದು ಶಾಸಕ ಹಾಲಪ್ಪ ಪ್ರಶ್ನಿಸಿದರು. ಬಹುತೇಕ ಶಾಸಕರು ಈ ವಿಷಯವಾಗಿ ಅಭಿಪ್ರಾಯ ಮಂಡಿಸಲು ಮುಂದಾದಾಗ ಸಭಾಧ್ಯಕ್ಷರು, ಉಪ ಪ್ರಶ್ನೆ ಮಾಡಿದ ಶಾಸಕರು ಮತ್ತು ಅಧಿಕಾರಿಗಳ ಜತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಚಿವರಿಗೆ ಸಲಹೆ ನೀಡಿದರು.

Facebook Comments