ಶಿವರಾಮ ಕಾರಂತ ಬಡಾವಣೆಗಾಗಿ 3546 ಎಕರೆ ಭೂ ಸ್ವಾದೀನಕ್ಕೆ ಅಧಿಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Assemblyಬೆಳಗಾವಿ (ಸುವರ್ಣಸೌಧ), ಡಿ.12- ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಗಾಗಿ 3,546 ಎಕರೆ ಭೂ ಸ್ವಾಧೀನಕ್ಕೆ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಡಿಸಿಎಂ ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು.  ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಪರಮೇಶ್ವರ್, ಕಳೆದ 2008ರಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಅದು ಹೈಕೋರ್ಟ್‍ನಲ್ಲಿ ರದ್ದಾಗಿತ್ತು. ಕಳೆದ ಆಗಸ್ಟ್‍ನಲ್ಲಿ ಶಿವರಾಮ ಕಾರಂತ ಬಡಾವಣೆಯ 3,546 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿದೆ. ಹೀಗಾಗಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ.

ಬಿಡಿಎಯಿಂದ ಎನ್‍ಓಸಿ ಪಡೆದು ಕಟ್ಟಡ ಅಥವಾ ಮನೆ ಕಟ್ಟಿರುವವರಿಗೆ ರಕ್ಷಣೆ ನೀಡುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.  ಇದಕ್ಕೂ ಮುನ್ನ ಮಾತನಾಡಿದ ವಿಶ್ವನಾಥ್ ಅವರು, ಶಿವರಾಮ ಕಾರಂತ ಬಡಾವಣೆಗೆ 15 ವರ್ಷದ ಹಿಂದೆಯೇ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈಗಾಗಲೇ ಬಿಡಿಎನಿಂದ ಎನ್‍ಒಸಿ ಪಡೆದು ಮನೆ ಕಟ್ಟಿಕೊಂಡಿದ್ದಾರೆ. ಕೆಲವರು ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿದ್ದು ಸರ್ಕಾರ ಯಾವ ರೀತಿ ರಕ್ಷಣೆ ಕೊಡುತ್ತದೆ ಎಂಬುದನ ತಿಳಿಸಬೇಕೆಂದು ಆಗ್ರಹಿಸಿದರು.

ಸ್ಪೀಕರ್ ಗರಂ:  ಬಿಜೆಪಿ ಶಾಸಕರಬಗ್ಗೆ ತೀವ್ರ ಅಸಮಾಧಾನಗೊಂಡು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಗರಂ ಆದ ಘಟನೆ ವಿಧಾನಸಬೆಯಲ್ಲಿಂದು ಜರುಗಿತು.  ಶೂನ್ಯವೇಳೆಯಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ಅವರ ಪ್ರಸ್ತಾಪದ ಬಗ್ಗೆ ಮಧ್ಯಪ್ರವೇಶಿಸಿ ಮಾತನಾಡಿದ ಸಭಾಧ್ಯಕ್ಷರು ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಿಗೆ ಅಪಮಾನವಾಗದಂತೆ ಹೆಚ್ಚಿನ ಭದ್ರತೆ ಒದಗಿಸಬೇಕು. ಶಾಸಕರನ್ನು ಗೌರವದಿಂದ ಕಾಣಬೇಕು. ಮತ್ತೆ ಶಾಸಕರಿಗೆ ಅಪಮಾನವಾಗುವಂತಾ ಘಟನೆ ನಡೆದರೆ ಹಕ್ಕುಚ್ಯುತಿ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಗ ಬಿಜೆಪಿ ಶಾಸಕರಾದ ಸಿ.ಟಿ.ರವಿ, ಸುನೀಲ್‍ಕುಮಾರ್ ಸೇರಿದಂತೆ ಹಲವು ಶಾಸಕರು ಎದ್ದು ನಿಂತು ಶಾಸಕ ರಾಜೇಶ್ ಅವರನ್ನು ಎಳೆದಾಡಿದ್ದಾರೆ. ಈ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದರಿಂದ ಸಿಟ್ಟಿಗೆದ್ದ ಸಬಾಧ್ಯಕ್ಷರು ಒಂದೇ ಸಮನೇ ಮಾತನಾಡುತ್ತೀರಲ್ಲ. ಇದೆಲ್ಲ ಹೊರಗಡೆ ಮಾಡಿ. ಇದೇ ಮೊದಲು ಮತ್ತು ಫೈನಲ್ ಎಂದು ಎಚ್ಚರಿಸಿದರು. ಆಗಲೂ ಕೂಡ ಅವರು ಎದ್ದು ನಿಂತು ಮಾತನಾಡುತ್ತಿದ್ದಾಗ ತೀವ್ರ ಅಸಮಾಧಾನಗೊಂಡ ಸಭಾಧ್ಯಕ್ಷರು ಕನ್ನಡದಲ್ಲಿ ಹೇಳಿದ್ದು ಅರ್ಥವಾಗುವುದಿಲ್ಲವೇ. ಈ ರೀತಿ ಮಾಡಿದರೆ ಸದನ ನಡೆಸಲಾಗುವುದಿಲ್ಲ. ಕೂಗಾಡಿ ಎಂದು ಬೇಸರಗೊಂಡರು.

ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದವೂ ನಡೆಯಿತು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ , ಆಡಳಿತ ಮತ್ತು ಪ್ರತಿಪಕ್ಷದ ಶಾಸಕರನ್ನು ರಕ್ಷಣೆ ಮಾಡಬೇಕಾದವರು ನೀವು. ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಮೇಲೆ ದೌರ್ಜನ್ಯವಾದರೆ ಯಾರು ರಕ್ಷಣೆ ಮಾಡಬೇಕು. ಶಾಸಕರಿಗಾಗಿರುವ ಅಪಮಾನದಿಂದ ನೋವುಂಟಾಗಿದ್ದು ಎಲ್ಲರೂ ಎದ್ದು ನಿಂತಿದ್ದಾರೆ. ಆ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಂಥ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.  ಆಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ಯಾವುದೇ ಶಾಸಕರಿಗೆ ಅಗೌರವ, ಅಪಮಾನವಾದರೆ ಸಹಿಸುವುದಿಲ್ಲ ಎಂದು ಸೂಚನೆ ನೀಡಿದರೂ ಗುಂಪು ಗುಂಪಾಗಿ ಎದ್ದು ನಿಂತರೆ ಹೇಗೆ? ಶಾಸಕರ ಪರವಾಗಿಯೇ ಸೂಚನೆ ನೀಡಿದ್ದೇನೆ. ಸದನಕ್ಕೆ ಗೌರವ ಕೊಡಬೇಕು ಇಲ್ಲದಿದ್ದರೆ ಸದನಕ್ಕೆ ಏಕೆ ಬರಬೇಕು. ಸದನ ಎಲ್ಲರಿಗೂ ಸೇರಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು, ಮಾಧ್ಯಮದವರು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕರಿಗೆ ಆಗಿರುವ ನೋವಿನ ಬಗ್ಗೆ ನಮಗೂ ಅರಿವಾಗಿದೆ.ಸಭಾಧ್ಯಕ್ಷರು ಪೀಠದಲ್ಲಿ ಕುಳಿತು ನಿರ್ದೇಶನ ನೀಡಿದ್ದಾರೆ. ಸರ್ಕಾರ ಉತ್ತರ ಕೊಡಲು ಸಿದ್ದವಿದೆ. ತಾಳ್ಮೆ ಕಳೆದುಕೊಳ್ಳಬಾರದು, ಹಾಗಂತ ನಮ್ಮವರು ಮಾಡಿದ್ದು ಸರಿ ಎಂದು ಹೇಳುವುದಿಲ್ಲ ಎಂದಾಗ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.

Facebook Comments