ಭೈರಸಂದ್ರ ನಾಗರಾಜ್‍ಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

Nagarajಬೆಂಗಳೂರು, ಡಿ.12- ಬಿಜೆಪಿ ಸದಸ್ಯನಾಗಿದ್ದುಕೊಂಡೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಭೈರಸಂದ್ರ ವಾರ್ಡ್‍ನ ಬಿಬಿಎಂಪಿ ಸದಸ್ಯ ನಾಗರಾಜ್ ಅವರಿಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಗಳಿವೆ. ಇದೇ 14ರಂದು ನಡೆಯಲಿರುವ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲೇ ಕೇವಲ 9 ಮಂದಿ ಸದಸ್ಯರಿರುವ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಭೈರಸಂದ್ರ ನಾಗರಾಜ್ ಆಯ್ಕೆಯಾಗಲಿದ್ದಾರೆ.  ಪ್ರತಿ ಸ್ಥಾಯಿ ಸಮಿತಿಯಲ್ಲಿ ತಲಾ 11 ಮಂದಿ ಸದಸ್ಯರಿರಬೇಕು. ಆದರೆ, ನಗರ ಯೋಜನೆ ಸ್ಥಾಯಿ ಸಮಿತಿಯಲ್ಲಿ ಕೇವಲ 9 ಮಂದಿ ಸದಸ್ಯರಿದ್ದಾರೆ. ಹೀಗಾಗಿ ಉಳಿದ ಇಬ್ಬರು ಸದಸ್ಯರ ಆಯ್ಕೆಗೆ ಮತ್ತೆ ಚುನಾವಣೆ ನಡೆಸಬೇಕಾಗಿರುವುದು ಪ್ರಾದೇಶಿಕ ಆಯುಕ್ತರ ಕರ್ತವ್ಯವಾಗಿದೆ.

ಖಾಲಿ ಇರುವ ಇಬ್ಬರು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವ ಮುನ್ನವೇ ಉಳಿದ 9 ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೈರಸಂದ್ರ ನಾಗರಾಜ್ ಅವರನ್ನು ನೇಮಕ ಮಾಡಲು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಗ್ರೀನ್‍ಸಿಗ್ನಲ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಗೊಂದಲಕ್ಕೆ ಕಾರಣವೇನು..? 12 ಸ್ಥಾಯಿ ಸಮಿತಿಗಳ ಪೈಕಿ ಐದು ಸಮಿತಿಗಳನ್ನು ಕಾಂಗ್ರೆಸ್, ನಾಲ್ಕು ಸಮಿತಿಗಳನ್ನು ಜೆಡಿಎಸ್ ಹಾಗೂ ಮೂರು ಸಮಿತಿಗಳನ್ನು ಪಕ್ಷೇತರರಿಗೆ ಬಿಟ್ಟುಕೊಡಲಾಗಿತ್ತು.

ಎಲ್ಲ 11 ಸಮಿತಿಗಳ ಆಯ್ಕೆಗೆ ಯಾವುದೇ ಚಕಾರವೆತ್ತದ ಬಿಜೆಪಿ ಸದಸ್ಯರು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ಅವರ ನೇಮಕಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪ್ರತಿ ಮೇಯರ್ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯೊಂದಿಗೆ ಮಾತುಕತೆ ನಡೆಸಿ ಮತದಾನದ ವೇಳೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಕಾಣಿಸಿಕೊಳ್ಳುತ್ತ ಕೇಸರಿ ಪಾಳಯಕ್ಕೆ ಟಾಂಗ್ ಕೊಡುತ್ತಿದ್ದ ಚಂದ್ರಪ್ಪರೆಡ್ಡಿಗೆ ತಕ್ಕ ಪಾಠ ಕಲಿಸಲು ಬಿಜೆಪಿ ಮುಖಂಡರು ಹೊಂಚುಹಾಕಿದ್ದರು.

ಇದರ ಜತೆಗೆ ಯಲಹಂಕ ಶಾಸಕ ವಿಶ್ವನಾಥ್ ಅವರ ಪತ್ನಿ ವಾಣಿ ವಿಶ್ವನಾಥ್ ಅವರ ಸೋಲಿನಲ್ಲೂ ಚಂದ್ರಪ್ಪರೆಡ್ಡಿ ಕೈವಾಡವಿತ್ತು. ಹೀಗಾಗಿ ಹೇಗಾದರೂ ಮಾಡಿ ಚಂದ್ರಪ್ಪರೆಡ್ಡಿ ಅವರಿಗೆ ಅಧಿಕಾರ ದಕ್ಕಿಸಿಕೊಡಬಾರದು ಎಂದು ಬಿಜೆಪಿ ಮುಖಂಡರು ಪ್ಲಾನ್ ಮಾಡಿದ್ದರು. ಅವರ ಯೋಜನೆಯಂತೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ನೇಮಕಕ್ಕೆ ಚುನಾವಣೆ ನಡೆದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಚಂದ್ರಪ್ಪರೆಡ್ಡಿ ಅವರನ್ನು ನಗರ ಯೋಜನೆ ಸಮಿತಿಗೆ ನೇಮಕ ಮಾಡಬಾರದು ಎಂದು ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚಂದ್ರಪ್ಪರೆಡ್ಡಿ ಚುನಾವಣೆಯಿಂದ ಹಿಂದೆ ಸರಿಯುವಂತಾಗಿತ್ತು.

ಹೀಗಾಗಿ ನಗರ ಯೋಜನೆಯ 11 ಮಂದಿ ಸದಸ್ಯರ ಆಯ್ಕೆಯಾಗಬೇಕಿದ್ದ ಸ್ಥಾಯಿ ಸಮಿತಿಗೆ ಕೇವಲ 9 ಮಂದಿ ಸದಸ್ಯರು ಮಾತ್ರ ಚುನಾಯಿತರಾಗಿದ್ದರು. ಈ ಸಂಖ್ಯಾಬಲದ ಕೊರತೆಯನ್ನೇ ಮುಂದಿಟ್ಟುಕೊಂಡು ನಗರ ಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನಾಗರಾಜ್‍ಗೆ ಬಿಟ್ಟುಕೊಡಲು ತಂತ್ರ ರೂಪಿಸಲಾಗುತ್ತಿದೆ.  ಋಣ ಸಂದಾಯ: ಜಯನಗರ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಭೈರಸಂದ್ರ ವಾರ್ಡ್‍ನ ಬಿಜೆಪಿ ಸದಸ್ಯರಾಗಿದ್ದ ನಾಗರಾಜ್ ಬಹಿರಂಗ ಬೆಂಬಲ ವ್ಯಕ್ತಪಡಿಸಿ ಸೌಮ್ಯರೆಡ್ಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಈ ಬೆಳವಣಿಗೆ ನಂತರ ಭೈರಸಂದ್ರ ನಾಗರಾಜ್ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು. ಹೀಗಾಗಿ ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್‍ನೊಂದಿಗೆ ಗುರುತಿಸಿಕೊಂಡಿದ್ದ ನಾಗರಾಜ್ ಅವರು ಉಪಚುನಾವಣೆಯಲ್ಲಿ ಮಾಡಿದ ಸಹಾಯಕ್ಕೆ ಋಣ ಸಂದಾಯ ಮಾಡುವ ನಿಟ್ಟಿನಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Facebook Comments