ದತ್ತ ಜಯಂತಿ ; 2 ಸಾವಿರ ದತ್ತಮಾಲಾಧಾರಿಗಳು ಭಾಗಿ

ಈ ಸುದ್ದಿಯನ್ನು ಶೇರ್ ಮಾಡಿ

Datta Malaಕಡೂರು, ಡಿ.13- ಈ ಬಾರಿಯ ದತ್ತ ಜಯಂತಿಗೆ ಕಡೂರು ತಾಲೂಕಿನಿಂದ ಎರಡು ಸಾವಿರ ದತ್ತ ಮಾಲಾಧಾರಿಗಳು ಭಾಗವಹಿಸಲಿದ್ದಾರೆ ಎಂದು ಭಜರಂಗ ದಳದ ಜಿಲ್ಲಾ ಸಹ ಸಂಚಾಲಕ ಯತಿರಾಜ್ ಹೇಳಿದರು. ಕಡೂರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ನಡೆದ ದತ್ತ ಮಾಲೆಗೆ ಚಾಲನೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರೊಂದಿಗೆ ಮಾಲೆ ಧರಿಸಿ ಮಾತನಾಡಿದರು. ಪ್ರತೀ ವರ್ಷವೂ ಕಡೂರು ತಾಲೂಕಿನಿಂದ ನೂರಾರು ಭಕ್ತರು ದತ್ತ ಮಾಲೆ ಧರಿಸುವ ಮೂಲಕ ಶ್ರೀ ದತ್ತಾತ್ರೇಯ ಪೀಠದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬರುತ್ತಿದ್ದಾರೆ. ಈ ಬಾರಿಯೂ ಕಡೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ ಎಂದರು.

ಚಿಕ್ಕಮಗಳೂರಿನ ದತ್ತಾತ್ರೇಯ ಪೀಠದ ಚಂದ್ರದ್ರೋಣ ಪರ್ವತದಲ್ಲಿ ಡಿಸೆಂಬರ್ 20 ರಿಂದ 22ರ ವರೆಗೆ ದತ್ತ ಜಯಂತಿ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಡಿ.20ರಂದು ಚಿಕ್ಕಮಗಳೂರು ನಗರದಲ್ಲಿ ಮಹಿಳೆಯರಿಂದ ಬೋಳರಾಮೇಶ್ವರ ದೇವಾಲಯದಿಂದ ಐಜಿ ರಸ್ತೆ ಮೂಲಕ ಕಾಮಧೇನು ಗಣಪತಿ ದೇವಾಲಯದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ ಎಂದರು.
ಪೀಠದಲ್ಲಿ ಶ್ರೀ ಅನಸೂಯಾ ದೇವಿಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆಯಲಿದೆ. 21ರಂದು ಪೀಠದಲ್ಲಿ ಗಣಪತಿ ಹೋಮ, ರುದ್ರ ಹೋಮ ನಡೆಯಲಿದೆ.2ರ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಚಿಕ್ಕಮಗಳೂರಿನ ಶ್ರೀ ಕಾಮಧೇನು ದೇವಾಲಯದಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 6 ಗಂಟೆಗೆ ಆಜದ್ ಪಾರ್ಕ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

ತಾಲೂಕಿನ ಕಡೂರು, ಬೀರೂರು ಪಟ್ಟಣ ಸೇರಿದಂತೆ ಎಲ್ಲ ಹೋಬಳಿಗಳ ಗ್ರಾಮಗಳಿಂದ ನೂರಾರು ಭಕ್ತರು ದತ್ತ ಮಾಲೆ ಧರಿಸಲಿದ್ದು, ಈ ಹಿನ್ನೆಲೆಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ದತ್ತ ಮಾಲೆಗೆ ಚಾಲನೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಭದ್ರಿಸ್ವಾಮಿ, ಭಜರಂಗದಳದ ತಾಲ್ಲೂಕು ಸಂಚಾಲಕ ನಾಗೇಂದ್ರ ಆಗ್ನಿ, ಪದಾಧಿಕಾರಿಗಳಾದ ಷಣ್ಮುಖ್, ಅನಿಲ್, ಗೌತಮ್, ಸಂತೋಷ್, ಗೋಪಿ, ಅನೂಪ್, ನವೀನ್, ಕೇಶವ್ ಮತ್ತಿತರಿದ್ದರು.

Facebook Comments