ಡಿಕೆಶಿ ಪ್ರಭಾವದ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

dk s

ಬೆಳಗಾವಿ(ಸುವರ್ಣಸೌಧ), ಡಿ.13- ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಭಾವದ ಬಗ್ಗೆ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಬೆಣ್ಣೆಹಳ್ಳ, ತುಪ್ಪರಿಹಳ್ಳದ ಯೋಜನೆಗಳ ಬಗ್ಗೆ ನವಲಗುಂದ ಕ್ಷೇತ್ರದ ಶಾಸಕ ಶಂಕರ ಬಿ.ಪಾಟೀಲ್ ಮುನೇನಕೊಪ್ಪ ಅವರು ಪ್ರಶ್ನೆ ಕೇಳಿದರು. ಅದಕ್ಕೆ ಉಪ ಪ್ರಶ್ನೆಯಾಗಿ ಸಿ.ಸಿ.ಪಾಟೀಲ್ ಮಾತನಾಡುತ್ತಾ, ಈ ಎರಡೂ ಯೋಜನೆಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಲ್ಲದೆ, ಸರ್ಕಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಭಾವಿ ವ್ಯಕ್ತಿ. ಅವರು ಮನಸ್ಸು ಮಾಡಿದರೆ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು. ಆಗ ಸ್ಪೀಕರ್ ರಮೇಶ್‍ಕುಮಾರ್, ಅವರು ಪ್ರಭಾವಿ ಎಂಬುದು ನಿಮಗೂ ಗೊತ್ತಾಗಿದೆಯೇ ಎಂದು ಕೇಳಿದರು.

ಬಿಜೆಪಿಯ ಬಸವರಾಜಬೊಮ್ಮಾಯಿ ಅವರು, ಶಿವಕುಮಾರ್ ಅವರ ಪ್ರಭಾವ ಬೆಣ್ಣೆಹಳ್ಳದವರೆಗೂ ಹರಿದಿದೆ ಎಂದು ಧ್ವನಿಗೂಡಿಸಿದರು. ಈ ಚರ್ಚೆ ನಡೆಯುವಾಗ ಸಚಿವ ಡಿ.ಕೆ.ಶಿವಕುಮಾರ್ ಹಣೆ ಚೆಚ್ಚಿಕೊಂಡು ನಗುಮುಖದಿಂದಲೇ ಪ್ರತಿಕ್ರಿಯಿಸಿದರು.ಬೆಣ್ಣೆ ಹಳ್ಳ ಮತ್ತು ತುಪ್ಪರಿಹಳ್ಳ ಭಾಗದಲ್ಲಿ ಸಿಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಆರು ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಆದಾಗ್ಯೂ ಇನ್ನೂ 2.2 ಟಿಎಂಸಿ ನೀರು ಉಳಿಯುತ್ತಿದೆ. ಅದನ್ನು ಬಳಸಿಕೊಳ್ಳಲು ಶೀಘ್ರ ಕ್ರಿಯಾ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

# ಬ್ಯಾರೇಜ್‍ಗಳ ರಕ್ಷಣೆಗೆ ಪೊಲೀಸರ ನೇಮಿಸಿ :
ಬೆಳಗಾವಿ(ಸುವರ್ಣಸೌಧ), ಡಿ.13- ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಗೇಟ್‍ಗಳನ್ನು ಮರಳುಮಾಫಿಯಾದವರು ಒಡೆದು ಹಾಕುತ್ತಿದ್ದಾರೆ. ಅವರುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮನವಿ ಮಾಡಿದರು.  ಪ್ರಶ್ನೋತ್ತರ ಅವಧಿಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣತಿ, ಉಮಾರಾಣಿ, ಉಮ್ಮರಜ್ ಬ್ಯಾರೇಜ್‍ಗಳಿಂದ ನೀರು ಸೋರಿ ಹೊರ ಹೋಗುತ್ತಿರುವುದನ್ನು ಶಾಸಕರು ಸರ್ಕಾರದ ಗಮನಕ್ಕೆ ತಂದರು.

ಉಮಾರಾಣಿ ಬ್ಯಾರೇಜ್‍ನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ಒಪ್ಪಿಕೊಂಡಿದ್ದಾರೆ. ಮರಳು ಮಾಫಿಯದವರು ನೀರು ಬೇಗ ಖಾಲಿಯಾಗಲಿ ಎಂಬ ಕಾರಣಕ್ಕಾಗಿ ಬ್ಯಾರೇಜ್‍ಗಳಿಗೆ ತೂತು ಮಾಡುತ್ತಿದ್ದಾರೆ. ಅವುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಒತ್ತಾಯಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಸೋರಿಕೆಯಾಗುತ್ತಿರುವ ಉಮಾರಾಣಿ ಬ್ಯಾರೇಜ್‍ಗೆ ಹೊಸ ಗೇಟ್ ಅಳವಡಿಸಲು 125 ಕೋಟಿ ಬಿಡುಗಡೆಯಾಗಿದ್ದು, 15ರಿಂದ 20 ದಿನಗಳಲ್ಲಿ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

Facebook Comments