ನೀರಾವರಿ ಯೋಜನೆ ಬಗ್ಗೆ ಇಡೀ ದಿನ ಚರ್ಚೆಗೆ ಅವಕಾಶ : ಸಭಾಧ್ಯಕ್ಷ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

Ramesh Kumarಬೆಳಗಾವಿ(ಸುವರ್ಣಸೌಧ), ಡಿ.13- ಉತ್ತರ ಕರ್ನಾಟಕ ಭಾಗದ ಆಲಮಟ್ಟಿ, ಕೃಷ್ಣಾಮೇಲ್ದಂಡೆ ಸೇರಿದಂತೆ ಇತರೆ ನೀರಾವರಿ ಯೋಜನೆ ಬಗ್ಗೆ ಇಡೀ ದಿನ ಚರ್ಚೆ ನಡೆಸಲು ಅವಕಾಶ ನೀಡುವುದಾಗಿ ಸಭಾಧ್ಯಕ್ಷ ರಮೇಶ್‍ಕುಮಾರ್ ಭರವಸೆ ನೀಡಿದರು. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಅವರು ಪ್ರಶ್ನೆ ಕೇಳಿ, ಆಲಮಟ್ಟಿ ಜಲಾಶಯವನ್ನು ಮೂರನೇ ಹಂತದ ಬಿ ಸ್ಕೀಮ್ ಯೋಜನೆಯಡಿ 224 ಮೀಟರ್‍ಗೆ ಎತ್ತರಿಸುವ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 519.60 ಮೀಟರ್ ಇರುವ ಆಲಮಟ್ಟಿ ಅಣೆಕಟ್ಟನ್ನು 524.25 ಮೀಟರ್‍ಗೆ ಏರಿಕೆ ಮಾಡಲು ಸರ್ಕಾರ ಸಿದ್ದವಿದೆ. ಇದರ ಭೂ ಸ್ವಾಧೀನಕ್ಕಾಗಿ 30ಸಾವಿರ ಕೋಟಿ ರೂ.ಗಳ ಹಣ ಅಗತ್ಯವಿದೆ. ಆದರೆ, ಕೃಷ್ಣ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಈ ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರ ನೀರಾವರಿ ವಿಷಯದಲ್ಲಿ ಯಾವ ರೀತಿಯ ಆದ್ಯತೆಯನ್ನು ತೋರಿಸುತ್ತದೆ ಎಂಬ ಬಗ್ಗೆ ಆಕ್ಷೇಪ ಇದೆ. ಕೆಆರ್‍ಎಸ್‍ನಲ್ಲಿ 1500ಕೋಟಿರೂ. ಖರ್ಚು ಡಿಸ್ನಿಲ್ಯಾಂಡ್ ಮಾಡುವ ಬದಲಾಗಿ ಆಲಮಟ್ಟಿ ಯೋಜನೆಯನ್ನು ಪೂರ್ಣಗೊಳಿಸಿ. ದುಡ್ಡು ಹೆಚ್ಚಾದಾಗ ಬೇಕಿದ್ದರೆ ಡಿಸ್ನಿಲ್ಯಾಂಡ್ ಯೋಜನೆಯನ್ನು ಕೈಗೆತ್ತಿಕೊಳ್ಳಿ ಎಂದು ಸಲಹೆ ನೀಡಿದರು.ಇದೇ ರೀತಿ ವಿಳಂಬವಾಗುತ್ತಿದ್ದರೆ ಆಲಮಟ್ಟಿ ಯೋಜನೆ 10 ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ್, ಡಿಸ್ನಿಲ್ಯಾಂಡ್‍ಗೆ ಸರ್ಕಾರದಿಂದ ಒಂದು ರೂ. ಖರ್ಚು ಮಾಡುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಸರ್ಕಾರದ ಆದ್ಯತೆ ಎಂದು ಸ್ಪಷ್ಟಪಡಿಸಿದರು. ಆ ಹಂತದಲ್ಲಿ ಬಿಜೆಪಿ ಶಾಸಕರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಮಂದಿ ಚರ್ಚೆಗೆ ಆಸಕ್ತಿ ತೋರಿಸಿದಾಗ ಪ್ರಶ್ನೋತ್ತರದ ಬದಲು ಅರ್ಧಗಂಟೆ ಚರ್ಚೆಗೆ ನೀಡುವುದಾಗಿ ಸ್ಪೀಕರ್ ಹೇಳಿದರು.  ಡಿಕೆಶಿ ಅವರು ಒಂದು ದಿನ ಪೂರ್ತಿ ಈ ಯೋಜನೆ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಮಂಗಳವಾರ ಸಮಯ ಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಿದರು.

Facebook Comments