ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DKS02ಬೆಳಗಾವಿ(ಸುವರ್ಣಸೌಧ), ಡಿ.13- ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಯಾದಗಿರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ ಒದಗಿಸಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಸವರಾಜಬೊಮ್ಮಾಯಿ ಅವರು, ಹಾವೇರಿ ಮತ್ತು ಗದಗ ಜಿಲ್ಲೆಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದಾಗ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿತ್ತು. ಎಚ್.ಕೆ.ಪಾಟೀಲ್ ಅವರ ಮೇಲಿನ ಪ್ರೀತಿಯಿಂದಾಗಿ ಸರ್ಕಾರ ಗದಗ ಜಿಲ್ಲೆಗೆ 100ಕೋಟಿ ನೀಡಿದೆ. ಹಾವೇರಿಗೆ ಹಣಕಾಸು ಸೌಲಭ್ಯ ಸಿಕ್ಕಿಲ್ಲ. 53 ಎಕರೆ ಜಾಗ ಲಭ್ಯವಿದೆ. ಬೇಗ ಹಣಬಿಡುಗಡೆ ಮಾಡಿ ಮೆಡಿಕಲ್ ಕಾಲೇಜು ಆರಂಭಿಸಿ ಎಂದರು.

ಹಾವೇರಿ ಜಿಲ್ಲೆಯಲ್ಲಿ 250 ಬೆಡ್ಡಿನ ಆಸ್ಪತ್ರೆ ಇದೆ. ಇನ್ನು 50 ಬೆಡ್ಡನ್ನು ಸ್ಥಾಪಿಸಲು ಹಣಕಾಸು ಸೌಲಭ್ಯ ಹೊಂದಿಸಿಕೊಳ್ಳಲಾಗುತ್ತಿದೆ. ಹೊಸದಾಗಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಲು 610ಕೋಟಿ ಅನುದಾನ ಬೇಕು. ಈ ಹಿಂದೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಅವುಗಳಿಗೆ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ. ಆರ್ಥಿಕ ಸ್ಥಿತಿಗತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.ತುಮಕೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸಾಧ್ಯತೆ ಇದೆಯೇ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವರು ನಕಾರಾತ್ಮಕ ಉತ್ತರ ನೀಡಿದರು.

ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯ್ನನು ಮೇಲ್ದರ್ಜೆಗೇರಿಸಬೇಕೆಂದು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ 38 ಬೆಡ್‍ಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಹೊಸದಾಗಿ 5 ಎಕರೆ ಜಾಗ ಪಡೆದು 150 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಅದಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು. ಮಧ್ಯಪ್ರವೇಶಿಸಿದ ಸ್ಪೀಕರ್, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಎಸ್‍ಐ ಆಸ್ಪತ್ರೆಯನ್ನು ದೊಡ್ಡದಾಗಿ ಕಟ್ಟಿಸಿದ್ದಾರೆ. ಅದರ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಅದಕ್ಕೆ ಉತ್ತರ ನೀಡಿದ ಸಚಿವರು, ಇಎಸ್‍ಐ ಆಸ್ಪತ್ರೆ ಇರುವುದು ಐತಿಹಾಸಿಕ ಕಟ್ಟಡ. ಅದನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಲಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆಸ್ಪತ್ರೆ ನಿರ್ವಹಣೆ ದುಬಾರಿಯಾದ್ದರಿಂದ ಎಲ್ಲವೂ ಮಾತುಕತೆಯಲ್ಲಿದೆ. ರಾಜ್ಯ ಸರ್ಕಾರ ಸಭಾಧ್ಯಕ್ಷರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತದೆ ಎಂದರು. ಹೊಸದಾಗಿ ಮೆಡಿಕಲ್ ಕಾಲೇಜು ಆರಂಭವಾಗಿರುವ ಕ್ಷೇತ್ರಗಳ ಶಾಸಕರ ಸಭೆ ಕರೆಯುವಂತೆ ಸ್ಪೀಕರ್ ಸಲಹೆ ನೀಡಿದರು.

Facebook Comments