ವಿಧಾನಮಂಡಲದಲ್ಲಿ ಇಂದು ಏನೇನಾಯ್ತು..? ಇಲ್ಲಿದೆ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Session--0-1-4

# ಡಿಕೆಶಿ ಪ್ರಭಾವದ ಬಗ್ಗೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ
ಬೆಳಗಾವಿ(ಸುವರ್ಣಸೌಧ), ಡಿ.13- ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಭಾವದ ಬಗ್ಗೆ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆ ನಡೆಯಿತು. ಬೆಣ್ಣೆಹಳ್ಳ, ತುಪ್ಪರಿಹಳ್ಳದ ಯೋಜನೆಗಳ ಬಗ್ಗೆ ನವಲಗುಂದ ಕ್ಷೇತ್ರದ ಶಾಸಕ ಶಂಕರ ಬಿ.ಪಾಟೀಲ್ ಮುನೇನಕೊಪ್ಪ ಅವರು ಪ್ರಶ್ನೆ ಕೇಳಿದರು. ಅದಕ್ಕೆ ಉಪ ಪ್ರಶ್ನೆಯಾಗಿ ಸಿ.ಸಿ.ಪಾಟೀಲ್ ಮಾತನಾಡುತ್ತಾ, ಈ ಎರಡೂ ಯೋಜನೆಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಲ್ಲದೆ, ಸರ್ಕಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಭಾವಿ ವ್ಯಕ್ತಿ. ಅವರು ಮನಸ್ಸು ಮಾಡಿದರೆ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು. ಆಗ ಸ್ಪೀಕರ್ ರಮೇಶ್‍ಕುಮಾರ್, ಅವರು ಪ್ರಭಾವಿ ಎಂಬುದು ನಿಮಗೂ ಗೊತ್ತಾಗಿದೆಯೇ ಎಂದು ಕೇಳಿದರು.

ಬಿಜೆಪಿಯ ಬಸವರಾಜಬೊಮ್ಮಾಯಿ ಅವರು, ಶಿವಕುಮಾರ್ ಅವರ ಪ್ರಭಾವ ಬೆಣ್ಣೆಹಳ್ಳದವರೆಗೂ ಹರಿದಿದೆ ಎಂದು ಧ್ವನಿಗೂಡಿಸಿದರು. ಈ ಚರ್ಚೆ ನಡೆಯುವಾಗ ಸಚಿವ ಡಿ.ಕೆ.ಶಿವಕುಮಾರ್ ಹಣೆ ಚೆಚ್ಚಿಕೊಂಡು ನಗುಮುಖದಿಂದಲೇ ಪ್ರತಿಕ್ರಿಯಿಸಿದರು.ಬೆಣ್ಣೆ ಹಳ್ಳ ಮತ್ತು ತುಪ್ಪರಿಹಳ್ಳ ಭಾಗದಲ್ಲಿ ಸಿಗುವ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಆರು ಏತ ನೀರಾವರಿ ಯೋಜನೆಗಳನ್ನು ರೂಪಿಸಲಾಗಿದೆ. ಆದಾಗ್ಯೂ ಇನ್ನೂ 2.2 ಟಿಎಂಸಿ ನೀರು ಉಳಿಯುತ್ತಿದೆ. ಅದನ್ನು ಬಳಸಿಕೊಳ್ಳಲು ಶೀಘ್ರ ಕ್ರಿಯಾ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

 

#   ಸುಮಾರು 6980.88 ಕೋಟಿ ರೂ.ಗಳ ವೆಚ್ಚ ವಿಧಾನಸಭೆಯಲ್ಲಿ ಮಂಡಿಸಲಾಯಿತು
ಬೆಳಗಾವಿ(ಸುವರ್ಣಸೌಧ), ಡಿ.13- ಇತ್ತೀಚೆಗೆ ನಡೆದ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ವೆಚ್ಚ, ಮೈಸೂರು ದಸರಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಅನುದಾನ, ಶಾಸಕರ ಕಾರು ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಸುಮಾರು 6980.88 ಕೋಟಿ ರೂ.ಗಳ ಪೂರಕ ಅಂದಾಜನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಆರ್ಥಿಕ ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬದಲಾಗಿ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡಿಸಿದರು.

15ನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಿಗೆ ಕಾರು ಖರೀದಿಸುವ ಸಲುವಾಗಿ ನೀಡುವ ಮುಂಗಡಕ್ಕಾಗಿ 31ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ವೆಚ್ಚ 37.5ಕೋಟಿ ಅಂದಾಜಿಸಲಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗೆ ಒಟ್ಟು 39 ಕೋಟಿ ಖರ್ಚಾಗಿದ್ದು, ಅದನ್ನು ರಾಜ್ಯ ಸರ್ಕಾರ ಭರಿಸಿದೆ. ಇನ್ನು ಬೆಳಗಾವಿಯ ಅಧಿವೇಶನಕ್ಕಾಗಿ 35 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ. ಸ್ಮಾರ್ಟ್ ಪೊಲೀಸಿಂಗ್‍ಗಾಗಿ 329 ಕೋಟಿ ಒದಗಿಸಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಕುಡಿಯುವ ನೀರಿನ ಯೋಜನೆಯ ಟಾಸ್ಕ್‍ಪ್ರೋರ್ಸ್ ಕಾಮಗಾರಿಗಾಗಿ 500ಕೋಟಿ, ಗ್ರಾಮೀಣ ಕುಡಿಯುವ ಯೋಜನೆಗೆ ಒಂದು ಸಾವಿರ ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ದುರಸ್ತಿಗೆ 3500 ಕೋಟಿ ಅನುದಾನ ಒದಗಿಸುವುದಾಗಿ ಹೇಳಿದೆ.84ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸುಮಾರು 60 ಕೋಟಿ ರೂ. ಅನುದಾನವನ್ನು, ಇತ್ತೀಚೆಗೆ ನಡೆದ ಮೈಸೂರು ದಸಾರಕ್ಕಾಗಿ 120 ಕೋಟಿ ಅನುದಾನವನ್ನು ಖರ್ಚಾಗುವುದಾಗಿ ಹೇಳಲಾಗಿದೆ.

ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸಹಕಾರಿ ಸಂಘಗಳು, ಬ್ಯಾಂಕುಗಳಿಗೆ 8ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡಲಾಗಿತ್ತು. ಅದನ್ನು ಅನುದಾನ ಎಂದು ಪರಿಗಣಿಸಲಾಗಿದೆ. ಇದಕ್ಕೆ 18 ಸಾವಿರ ಕೋಟಿ ರೂ.ಗಳನ್ನು ಸೇರಿಸಿ ಒಟ್ಟು 26ಸಾವಿರ ಕೋಟಿ ರೂ.ಗಳನ್ನು ಸಾಲ ಮನ್ನಾಕ್ಕಾಗಿ ನೀಡುವುದಾಗಿ ತಿಳಿಸಲಾಗಿದೆ. ಒಟ್ಟು ಸಾಲ ಮನ್ನಾಕ್ಕಾಗಿ 40ಸಾವಿರ ಕೋಟಿ ಅಗತ್ಯವಿದೆ ಎಂದು ಪೂರಕ ಅಂದಾಜಿನಲ್ಲಿ ವಿವರಿಸಲಾಗಿದೆ.

************

# ಸರ್ಕಾರದ ಅನುಮತಿ ಸಿಕ್ಕರೆ ಪುಲಕೇಶಿನಗರ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪರಿಶೀಲನೆ
ಬೆಳಗಾವಿ(ಸುವರ್ಣಸೌಧ), ಡಿ.13- ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ತಾಂತ್ರಿಕ ತೊಡಕ್ಕಿದ್ದು, ಸರ್ಕಾರದ ಅನುಮತಿ ಸಿಕ್ಕರೆ ಪರಿಶೀಲನೆ ನಡೆಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದಪಾಟೀಲ್ ಹೇಳಿದರು. ಪುಲಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಕ್ಷೇತ್ರದ ಕಾಡಗೊಂಡನಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಆ ಭಾಗದಲ್ಲಿ ಬಡ ಜನರು ಹೆಚ್ಚು ವಾಸಿಸುತ್ತಿದ್ದಾರೆ. ಅವರಿಗೆ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವ ಶಿವಾನಂದಪಾಟೀಲ್ ಅವರು, ಆರೋಗ್ಯ ಕೇಂದ್ರವು 73560 ಜನಸಂಖ್ಯೆಯನ್ನು ಹೊಂದಿದೆ. ಈ ಆಸ್ಪತ್ರೆಯ 8 ಕಿ.ಮೀ. ಅಂತರದಲ್ಲಿ ಬೌರಿಂಗ್ ಆಸ್ಪತ್ರೆ, ಘೋಷ ಹೆರಿಗೆ ಆಸ್ಪತ್ರೆ , 12 ಕಿ.ಮೀ. ಅಂತರದಲ್ಲಿ ವಿಕ್ಟೋರಿಯಾ, ವಾಣಿವಿಲಾಸ ಆಸ್ಪತ್ರೆ, 18 ಕಿ.ಮೀ. ಅಂತರದಲ್ಲಿ ಯಲಹಂಕ ಸಾರ್ವಜನಿಕ ಆಸ್ಪತ್ರೆ, 10 ಕಿ.ಮೀ. ಅಂತರದಲ್ಲಿ ಕೆ.ಆರ್.ಪುರ ಆಸ್ಪತ್ರೆ ಇದೆ. ಜತೆಗೆ ಕಾಡುಗೊಂಡನಹಳ್ಳಿಯಲ್ಲಿ ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆ ಇದೆ. ಹಾಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ತಾಂತ್ರಿಕ ಅಡಚಣೆ ಇದೆ. ಸರ್ಕಾರ ಅದಕ್ಕೆ ಅನುಮತಿ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

************

# 2100 ಕೋಟಿ ರೂ.ಗಳಲ್ಲಿ ಇನ್ನು 800 ಕೋಟಿ ಖರ್ಚಾಗಿಲ್ಲ – ಪಿ.ರಾಜೀವ್
ಬೆಳಗಾವಿ(ಸುವರ್ಣಸೌಧ), ಡಿ.13- ಸಣ್ಣ ನೀರಾವರಿ ಇಲಾಖೆಗೆ ಒದಗಿಸಲಾಗಿರುವ 2100 ಕೋಟಿ ರೂ.ಗಳಲ್ಲಿ ಇನ್ನು 800 ಕೋಟಿ ಖರ್ಚಾಗಿಲ್ಲ ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಅಸಮಾಧಾನ ವ್ಯಕ್ತಪಡಿಸಿದರು.  ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಸಮಗ್ರ ಮಾಹಿತಿ ಆಧರಿಸಿ ಹೇಳುವುದಾರೆ 2017-18ನೇ ಸಾಲಿನಲ್ಲಿ ಇಲಾಖೆಗೆ 2100 ಕೋಟಿ ಅನುದಾನ ಒದಗಿಸಲಾಗಿದೆ. ಆದರೆ ಈವರೆಗೂ 1200 ಕೋಟಿ ಮಾತ್ರ ಖರ್ಚಾಗಿದೆ. ಆರ್ಥಿಕ ವರ್ಷ ಬಾಕಿ ಇರುವುದು ಕೇವಲ ಮೂರು ತಿಂಗಳು ಅಷ್ಟರಲ್ಲಿ ಉಳಿದ 800 ಕೋಟಿ ಖರ್ಚಾಗಲಿದೆಯೇ ಎಂದು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಸರ್ಕಾರ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಲಿದೆ ಎಂದು ಭರವಸೆ ನೀಡಿದರು.

# ಪ್ರತ್ಯೇಕವಾಗಿ ಎಲೆಕ್ಟ್ರಿಕಲ್ ಎಂಜನಿಯರ್‍ಗಳನ್ನು ನೇಮಿಸಬೇಕು
ಬೆಳಗಾವಿ(ಸುವರ್ಣಸೌಧ), ಡಿ.13- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಇಲಾಖೆಗೆ ಪ್ರತ್ಯೇಕವಾಗಿ ಎಲೆಕ್ಟ್ರಿಕಲ್ ಎಂಜನಿಯರ್‍ಗಳನ್ನು ನೇಮಿಸಬೇಕು ಎಂಬ ಬೇಡಿಕೆಯನ್ನು ಸಚಿವ ಕೃಷ್ಣಬೈರೇಗೌಡ ತಳ್ಳಿ ಹಾಕಿದರು.  ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಭಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೈಗೆತ್ತಿಕೊಳ್ಳುವ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ತೀಕರಣದ ಎಸ್ಟಿಮೇಟ್ ಮಾಡಿಕೊಡಲು ಎಸ್ಕಾಂಗಳು ವಿಳಂಬ ಮಾಡುತ್ತಿವೆ. ಅದಕ್ಕಾಗಿ ಇಲಾಖೆಗಾಗಿಯೇ ಪ್ರತ್ಯೇಕವಾಗಿ ಎಲೆಕ್ಟ್ರಿಕಲ್ ಇಂಜನಿಯರ್‍ಗಳನ್ನು ನೇಮಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಇಲಾಖೆಯ ಸಚಿವ ಕೃಷ್ಣಬೈರೇಗೌಡ, ಎಸ್ಟಿಮೇಟ್‍ಗಳನ್ನು ಎಸ್ಕಾಂಗಳ ಸಹಕಾರದಿಂದಲೇ ಸಿದ್ದಪಡಿಸುತ್ತಿದ್ದೇವೆ. ಈವರೆಗೂ ಯಾವುದೇ ತೊಂದರಯಾಗಿಲ್ಲ. ಭಂಟ್ವಾಳ ಕ್ಷೇತ್ರದಲ್ಲಿ ಸಮಸ್ಯೆ ಇದ್ದರೆ ಅದನ್ನು ತಾವೇ ಜವಾಬ್ದಾರಿಗೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದರು.ಬಿಜೆಪಿ ಶಾಸಕ  ಕುಮಾರ್ ಬಂಗಾರಪ್ಪ ಅವರು ಕುಡಿಯುವ ನೀರಿನ ಯೋಜನೆಯ ನೀಲನಕ್ಷೆ ಮತ್ತು ಇತರೆ ಮಾಹಿತಿಗಳನ್ನು ಗ್ರಾಮ ಪಂಚಾಯ್ತಿ ಪಿಡಿಒಗಳಿಗೂ ಒದಗಿಸುವಂತೆ ಸಲಹೆ ನೀಡಿದರು. ಈಗ ಪಿಡಿಒಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಯೋಜನೆಗಳ ಬಗ್ಗೆ ಅವರಿಗೆ ವಿವರಗಳೇ ಇಲ್ಲ ಎಂದು ಹೇಳಿದರು. ಈ ಸಲಹೆ ಉತ್ತಮವಾಗಿದ್ದು, ಅದನ್ನು ಪರಿಶೀಲಿಸುವಂತೆ ಸ್ಪೀಕರ್ ಸಲಹೆ ನೀಡಿದರು.

************

# ಬ್ಯಾರೇಜ್‍ಗಳ ರಕ್ಷಣೆಗೆ ಪೊಲೀಸರ ನೇಮಿಸಿ
ಬೆಳಗಾವಿ(ಸುವರ್ಣಸೌಧ), ಡಿ.13- ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಗೇಟ್‍ಗಳನ್ನು ಮರಳುಮಾಫಿಯಾದವರು ಒಡೆದು ಹಾಕುತ್ತಿದ್ದಾರೆ. ಅವರುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮನವಿ ಮಾಡಿದರು. ಪ್ರಶ್ನೋತ್ತರ ಅವಧಿಯಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣತಿ, ಉಮಾರಾಣಿ, ಉಮ್ಮರಜ್ ಬ್ಯಾರೇಜ್‍ಗಳಿಂದ ನೀರು ಸೋರಿ ಹೊರ ಹೋಗುತ್ತಿರುವುದನ್ನು ಶಾಸಕರು ಸರ್ಕಾರದ ಗಮನಕ್ಕೆ ತಂದರು.

ಉಮಾರಾಣಿ ಬ್ಯಾರೇಜ್‍ನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ಒಪ್ಪಿಕೊಂಡಿದ್ದಾರೆ. ಮರಳು ಮಾಫಿಯದವರು ನೀರು ಬೇಗ ಖಾಲಿಯಾಗಲಿ ಎಂಬ ಕಾರಣಕ್ಕಾಗಿ ಬ್ಯಾರೇಜ್‍ಗಳಿಗೆ ತೂತು ಮಾಡುತ್ತಿದ್ದಾರೆ. ಅವುಗಳ ರಕ್ಷಣೆಗೆ ಪೊಲೀಸರನ್ನು ನೇಮಿಸಿ ಎಂದು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, ಸೋರಿಕೆಯಾಗುತ್ತಿರುವ ಉಮಾರಾಣಿ ಬ್ಯಾರೇಜ್‍ಗೆ ಹೊಸ ಗೇಟ್ ಅಳವಡಿಸಲು 125 ಕೋಟಿ ಬಿಡುಗಡೆಯಾಗಿದ್ದು, 15ರಿಂದ 20 ದಿನಗಳಲ್ಲಿ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

************

# ನೀರಾವರಿ ಯೋಜನೆ ಬಗ್ಗೆ ಇಡೀ ದಿನ ಚರ್ಚೆ- ಸಭಾಧ್ಯಕ್ಷ ಭರವಸೆ
ಬೆಳಗಾವಿ(ಸುವರ್ಣಸೌಧ), ಡಿ.13- ಉತ್ತರ ಕರ್ನಾಟಕ ಭಾಗದ ಆಲಮಟ್ಟಿ, ಕೃಷ್ಣಾಮೇಲ್ದಂಡೆ ಸೇರಿದಂತೆ ಇತರೆ ನೀರಾವರಿ ಯೋಜನೆ ಬಗ್ಗೆ ಇಡೀ ದಿನ ಚರ್ಚೆ ನಡೆಸಲು ಅವಕಾಶ ನೀಡುವುದಾಗಿ ಸಭಾಧ್ಯಕ್ಷ ರಮೇಶ್‍ಕುಮಾರ್ ಭರವಸೆ ನೀಡಿದರು. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಅವರು ಪ್ರಶ್ನೆ ಕೇಳಿ, ಆಲಮಟ್ಟಿ ಜಲಾಶಯವನ್ನು ಮೂರನೇ ಹಂತದ ಬಿ ಸ್ಕೀಮ್ ಯೋಜನೆಯಡಿ 224 ಮೀಟರ್‍ಗೆ ಎತ್ತರಿಸುವ ಯೋಜನೆಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.ಇದಕ್ಕೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 519.60 ಮೀಟರ್ ಇರುವ ಆಲಮಟ್ಟಿ ಅಣೆಕಟ್ಟನ್ನು 524.25 ಮೀಟರ್‍ಗೆ ಏರಿಕೆ ಮಾಡಲು ಸರ್ಕಾರ ಸಿದ್ದವಿದೆ. ಇದರ ಭೂ ಸ್ವಾಧೀನಕ್ಕಾಗಿ 30ಸಾವಿರ ಕೋಟಿ ರೂ.ಗಳ ಹಣ ಅಗತ್ಯವಿದೆ. ಆದರೆ, ಕೃಷ್ಣ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಈ ಯೋಜನೆ ವಿಳಂಬವಾಗುತ್ತಿದೆ ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸರ್ಕಾರ ನೀರಾವರಿ ವಿಷಯದಲ್ಲಿ ಯಾವ ರೀತಿಯ ಆದ್ಯತೆಯನ್ನು ತೋರಿಸುತ್ತದೆ ಎಂಬ ಬಗ್ಗೆ ಆಕ್ಷೇಪ ಇದೆ. ಕೆಆರ್‍ಎಸ್‍ನಲ್ಲಿ 1500ಕೋಟಿರೂ. ಖರ್ಚು ಡಿಸ್ನಿಲ್ಯಾಂಡ್ ಮಾಡುವ ಬದಲಾಗಿ ಆಲಮಟ್ಟಿ ಯೋಜನೆಯನ್ನು ಪೂರ್ಣಗೊಳಿಸಿ. ದುಡ್ಡು ಹೆಚ್ಚಾದಾಗ ಬೇಕಿದ್ದರೆ ಡಿಸ್ನಿಲ್ಯಾಂಡ್ ಯೋಜನೆಯನ್ನು ಕೈಗೆತ್ತಿಕೊಳ್ಳಿ ಎಂದು ಸಲಹೆ ನೀಡಿದರು.ಇದೇ ರೀತಿ ವಿಳಂಬವಾಗುತ್ತಿದ್ದರೆ ಆಲಮಟ್ಟಿ ಯೋಜನೆ 10 ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ್, ಡಿಸ್ನಿಲ್ಯಾಂಡ್‍ಗೆ ಸರ್ಕಾರದಿಂದ ಒಂದು ರೂ. ಖರ್ಚು ಮಾಡುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಸರ್ಕಾರದ ಆದ್ಯತೆ ಎಂದು ಸ್ಪಷ್ಟಪಡಿಸಿದರು. ಆ ಹಂತದಲ್ಲಿ ಬಿಜೆಪಿ ಶಾಸಕರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಮಂದಿ ಚರ್ಚೆಗೆ ಆಸಕ್ತಿ ತೋರಿಸಿದಾಗ ಪ್ರಶ್ನೋತ್ತರದ ಬದಲು ಅರ್ಧಗಂಟೆ ಚರ್ಚೆಗೆ ನೀಡುವುದಾಗಿ ಸ್ಪೀಕರ್ ಹೇಳಿದರು. ಡಿಕೆಶಿ ಅವರು ಒಂದು ದಿನ ಪೂರ್ತಿ ಈ ಯೋಜನೆ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ. ಮಂಗಳವಾರ ಸಮಯ ಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಿದರು.

************

# ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ : ಡಿ.ಕೆ.ಶಿವಕುಮಾರ್
ಬೆಳಗಾವಿ(ಸುವರ್ಣಸೌಧ), ಡಿ.13- ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಯಾದಗಿರಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಹಣಕಾಸು ಸೌಲಭ್ಯ ಒದಗಿಸಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಬಸವರಾಜಬೊಮ್ಮಾಯಿ ಅವರು, ಹಾವೇರಿ ಮತ್ತು ಗದಗ ಜಿಲ್ಲೆಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾದಾಗ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿತ್ತು. ಎಚ್.ಕೆ.ಪಾಟೀಲ್ ಅವರ ಮೇಲಿನ ಪ್ರೀತಿಯಿಂದಾಗಿ ಸರ್ಕಾರ ಗದಗ ಜಿಲ್ಲೆಗೆ 100ಕೋಟಿ ನೀಡಿದೆ. ಹಾವೇರಿಗೆ ಹಣಕಾಸು ಸೌಲಭ್ಯ ಸಿಕ್ಕಿಲ್ಲ. 53 ಎಕರೆ ಜಾಗ ಲಭ್ಯವಿದೆ. ಬೇಗ ಹಣಬಿಡುಗಡೆ ಮಾಡಿ ಮೆಡಿಕಲ್ ಕಾಲೇಜು ಆರಂಭಿಸಿ ಎಂದರು.

ಹಾವೇರಿ ಜಿಲ್ಲೆಯಲ್ಲಿ 250 ಬೆಡ್ಡಿನ ಆಸ್ಪತ್ರೆ ಇದೆ. ಇನ್ನು 50 ಬೆಡ್ಡನ್ನು ಸ್ಥಾಪಿಸಲು ಹಣಕಾಸು ಸೌಲಭ್ಯ ಹೊಂದಿಸಿಕೊಳ್ಳಲಾಗುತ್ತಿದೆ. ಹೊಸದಾಗಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಲು 610ಕೋಟಿ ಅನುದಾನ ಬೇಕು. ಈ ಹಿಂದೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಅವುಗಳಿಗೆ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ. ಆರ್ಥಿಕ ಸ್ಥಿತಿಗತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.ತುಮಕೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸಾಧ್ಯತೆ ಇದೆಯೇ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕೇಳಿದ ಪ್ರಶ್ನೆಗೆ ಸಚಿವರು ನಕಾರಾತ್ಮಕ ಉತ್ತರ ನೀಡಿದರು.

ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯ್ನನು ಮೇಲ್ದರ್ಜೆಗೇರಿಸಬೇಕೆಂದು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಲಬುರಗಿಯ ಜಿಲ್ಲಾಸ್ಪತ್ರೆಯಲ್ಲಿ 38 ಬೆಡ್‍ಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಹೊಸದಾಗಿ 5 ಎಕರೆ ಜಾಗ ಪಡೆದು 150 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ. ಅದಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು. ಮಧ್ಯಪ್ರವೇಶಿಸಿದ ಸ್ಪೀಕರ್, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಇಎಸ್‍ಐ ಆಸ್ಪತ್ರೆಯನ್ನು ದೊಡ್ಡದಾಗಿ ಕಟ್ಟಿಸಿದ್ದಾರೆ. ಅದರ ನಿರ್ವಹಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಅದಕ್ಕೆ ಉತ್ತರ ನೀಡಿದ ಸಚಿವರು, ಇಎಸ್‍ಐ ಆಸ್ಪತ್ರೆ ಇರುವುದು ಐತಿಹಾಸಿಕ ಕಟ್ಟಡ. ಅದನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಲಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆಸ್ಪತ್ರೆ ನಿರ್ವಹಣೆ ದುಬಾರಿಯಾದ್ದರಿಂದ ಎಲ್ಲವೂ ಮಾತುಕತೆಯಲ್ಲಿದೆ. ರಾಜ್ಯ ಸರ್ಕಾರ ಸಭಾಧ್ಯಕ್ಷರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತದೆ ಎಂದರು. ಹೊಸದಾಗಿ ಮೆಡಿಕಲ್ ಕಾಲೇಜು ಆರಂಭವಾಗಿರುವ ಕ್ಷೇತ್ರಗಳ ಶಾಸಕರ ಸಭೆ ಕರೆಯುವಂತೆ ಸ್ಪೀಕರ್ ಸಲಹೆ ನೀಡಿದರು.

************

# ಹೇಮಾವತಿ ನದಿಪಾತ್ರದಿಂದ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು 
ಬೆಳಗಾವಿ(ಸುವರ್ಣಸೌಧ), ಡಿ.13- ಹೇಮಾವತಿ ನದಿಪಾತ್ರದಿಂದ ತುಮಕೂರು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲು ಇರುವ ಸಮಸ್ಯೆಯನ್ನು ಆ ಜಿಲ್ಲೆಯ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಪರಿಹರಿಸುವ ಭರವಸೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು.  ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಸ್ತಾಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಸಂಬಂಧಪಟ್ಟ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ. ತುಮಕೂರು ಜಿಲ್ಲೆಗೆ ನೀರು ಹರಿಸುವ ವಿಚಾರದಲ್ಲಿ ಆ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಮಾಧುಸ್ವಾಮಿ, ತುಮಕೂರು ಜಿಲ್ಲೆಗೆ ಹೇಮಾವತಿಯಿಂದ 24 ಟಿಎಂಸಿ ನೀರು ಬರಲಿದೆ ಎಂಬ ಆಶಾಭಾವನೆ ಇದ್ದು, ಆದರೆ, ಪ್ರವಾಸ ಬಂದಂತ್ತ ಸಂದರ್ಭದಲ್ಲಿ ಸ್ವಲ್ಪ ನೀರು ಬಿಟ್ಟು ನಿಲ್ಲಿಸಲಾಗಿದೆ. 15-20 ದಿನಗಳಿಂದ ನೀರು ಬಿಟ್ಟಿಲ್ಲ. ಜಿಲ್ಲೆಯ ಸಚಿವರು, ಶಾಸಕರಿಗೆ ನೀರು ಬಿಡುವುದನ್ನು ಹೇಳುವುದಿಲ್ಲ. ನಿಲ್ಲಿಸುವುದನ್ನೂ ಹೇಳುವುದಿಲ್ಲ. ನೀರಾವರಿ ಸಲಹಾ ಸಮಿತಿಯನ್ನು ಸಂಬಂಧಪಟ್ಟ ಎರಡೂ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಯವರಿಗೆ ವಹಿಸುವುದ ಸೂಕ್ತವೇನೋ ಎಂದರು.

ಹಾಸನವರಿಂದ ಬದುಕಲು ಆಗುವುದಿಲ್ಲ ಎನ್ನುತ್ತಿದ್ದಂತೆ ಆಕ್ಷೇಪ ವೆತ್ತಿದ ಜೆಡಿಎಸ್‍ನ ಕೆ.ಎಂ.ಶಿವಲಿಂಗೇಗೌಡ, ಹಾಸನದವರ ಮೇಲೆ ಆರೋಪಿಸಬೇಡಿ, ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಹೇಳಿದರು. ಆಗ ಮಾತು ಮುಂದುವರೆಸಿದ ಮಾಧುಸ್ವಾಮಿ, ಅರಸೀಕೆರೆ ತಾಲ್ಲೂಕಿನವರಿಗೂ ಹೇಮವಾತಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ. ಅವರು ಹೇಳಿಕೊಳ್ಳಲು ಆಗುವುದಿಲ್ಲ ಎಂದರು.  ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಹೇಮಾವತಿ ನೀರಿಗಾಗಿ ತುಮಕೂರು ಜಿಲ್ಲೆಯಲ್ಲಿ ಹೋರಾಟ, ಸತ್ಯಾಗ್ರಹ ಎಲ್ಲವನ್ನೂ ನಡೆಸಲಾಗಿದೆ. ಕೆರೆ, ಕಟ್ಟೆಗೆ ನೀರು ತುಂಬಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ನಾವು ತೀರ್ಮಾನಿಸಿದ್ದೇವೆ ಎಂದರು.

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸ್ಥಾನವನ್ನು ಆಯಾ ಜಿಲ್ಲೆಯ ಉಸ್ತುವಾರಿ ಸಚಿವರ ಬದಲಾಗಿ ಬೇರೆಯವರಿಗೆ ನೀಡುವುದು ಸೂಕ್ತ ಎಂಬ ಸಲಹೆ ನೀಡಿದರು. ತುಮಕೂರು ಜಿಲ್ಲೆಯ ಹಲವು ಶಾಸಕರು ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿದರು. ಆಗ ಜೆಡಿಎಸ್ ಶಾಸಕ ಸುರೇಶ್‍ಗೌಡ, ನಾಗಮಂಗಲ ತಾಲ್ಲೂಕಿನಲ್ಲೂ ಕುಡಿಯಲು ನೀರಿಲ್ಲ. ನಾವು ಕೊನೆಯ ಭಾಗದಲ್ಲಿದ್ದೇವೆ ಎಂದು ಸದನದ ಗಮನ ಸೆಳೆದರು. ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಮಾತನಾಡಿ, ಕಳೆದ 25 ವರ್ಷಗಳಿಂದಲೂ ಕುಣಿಗಲ್ ತಾಲ್ಲೂಕಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

Facebook Comments