ವೀಸಾ ಅವಧಿ ಮುಗಿದರೂ ಸ್ವದೇಶಕ್ಕೆ ಮರಳದೇ ಬೆಂಗಳೂರಲ್ಲಿ ಡ್ರಗ್ಸ್ ಮಾರುತ್ತಿದ್ದ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

SUSDಬೆಂಗಳೂರು, ಡಿ.13- ಸ್ಟೂಡೆಂಟ್ ವೀಸಾ ಮೇಲೆ ಬೆಂಗಳೂರಿಗೆ ಬಂದು ವೀಸಾ ಅವಧಿ ಮುಗಿದಿದ್ದರೂ ಸ್ವದೇಶಕ್ಕೆ ವಾಪಸ್ಸಾಗದೆ ನಗರದಲ್ಲಿ ಮಾದಕವಸ್ತುಗಳನ್ನು ಶೂ ಮತ್ತು ಸಾಕ್ಸ್‍ಗಳಲ್ಲಿ ಬಚ್ಚಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ನೈಜೀರಿಯಾ ಹಾಗೂ ಕಾಂಗೋ ದೇಶದ ಪ್ರಜೆ ಸೇರಿ ಮೂವರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಜಾನ್ ಕೆನಡಿ (37) ಮತ್ತು ಕಾಂಗೋ ದೇಶದ ಕ್ಯಾನಾನ್ ಆ್ಯಡ್ಲಿ (32) ಮತ್ತು ಬೆಂಗಳೂರಿನ ಬಿನ್ನಿಮಿಲ್ ನಿವಾಸಿ ಅದಿತ್ಯ (22) ಬಂಧಿತರಾಗಿದ್ದು, ಇವರಿಂದ 1 ಲಕ್ಷ ರೂ. ಮೌಲ್ಯದ 21.59 ಕೆಜಿ ತೂಕದ ಮಾದಕ ವಸ್ತು ಎಂಡಿಎಂಎ ಎಕ್ಸ್‍ಟೆಸಿ ಟ್ಯಾಬ್‍ಲೆಟ್ ಮತ್ತು ಕ್ರಿಸ್ಟೆಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೋರಮಂಗಲ ವ್ಯಾಪ್ತಿಯ ಅಂಬೇಡ್ಕರ್ ಪಾರ್ಕ್ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುವನ್ನು ವಿದೇಶಿ ಪ್ರಜೆಗಳು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಆಗ್ನೇಯ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯ ಅವರು ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಕೋರಮಂಗಲ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಸಂಬಂಧ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಥಳದ ಮೇಲೆ ದಾಳಿ ಮಾಡಿ ಇಬ್ಬರು ವಿದೇಶಿ ಪ್ರಜೆ ಹಾಗೂ ಸ್ಥಳೀಯನೊಬ್ಬನನ್ನು ಬಂಧಿಸಿದ್ದಾರೆ.

ಆರೋಪಿ ಜಾನ್ ಕೆನಡಿ ನೈಜೀರಿಯಾ ದೇಶದ ಪ್ರಜೆಯಾಗಿದ್ದು ತನಿಖೆ ವೇಳೆ ನೈಜೀರಿಯಾ ದೇಶದ ಪಾಸ್‍ಪೊೀರ್ಟ್ ಮತ್ತು ಭಾರತೀಯ ಸ್ಟೂಡೆಂಟ್ ವೀಸಾ ಪ್ರತಿ ಸಿಕ್ಕಿದ್ದು ತನ್ನ ಅಸಲಿ ಪಾಸ್‍ಪೊೀರ್ಟ್ ಕಳೆದು ಹೋಗಿರುವುದಾಗಿ ತಿಳಿಸಿದ್ದಾನೆ. ಈ ಪ್ರತಿಯನ್ನು ಪರಿಶೀಲಿಸಿದಾಗ ಪಾರ್ಸ್ ಪೊೀರ್ಟ್ ನಂಬರ್ ವಿದೇಶಿಯರ ನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿರುವುದಿಲ್ಲ ಅಲ್ಲದೆ ವೀಸಾ ನಂಬರ್ ಉಗಾಂಡ ದೇಶದ ಪ್ರಜೆಗೆ ಸಂಬಂಧಿಸಿದ್ದಾಗಿದ್ದು, ಈತನು ನಕಲಿ ಭಾರತೀಯ ವೀಸಾ ಸೃಷ್ಟಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈತನ ಪಾಸ್‍ಪೊೀರ್ಟ್ ನೈಜತೆ ಸಂಬಂಧ ನೈಜೀರಿಯಾ ರಾಯಭಾರಿ ಕಚೇರಿ ಜೊತೆ ಪತ್ರ ವ್ಯವಹಾರ ನಡೆಸಿದ್ದು ವರದಿ ಬರಬೇಕಿದೆ.

ಮತ್ತೊಬ್ಬ ಆರೋಪಿ ಕೆನನ್ ಆ್ಯಂಡ್ಲಿ ಕಾಂಗೋ ದೇಶದ ಪ್ರಜೆಯಾಗಿದ್ದು ಈತ ಸ್ಟೂಡೆಂಟ್ ವೀಸಾದಲ್ಲಿ ಮಾರ್ಚ್ 2012ನೆ ಸಾಲಿನಲ್ಲಿ ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಸೆಪ್ಟೆಂಬರ್ 2012ನೇ ಸಾಲಿಗೆ ಮುಕ್ತಾಯವಾಗಿದ್ದರೂ ಸಹ ಸ್ವದೇಶಕ್ಕೆ ವಾಪಸ್ ಆಗದೆ ಅಕ್ರಮವಾಗಿ ಭಾರತದಲ್ಲಿ ನೆಲಸಿ ನೈಜೀರಿಯಾ ಪ್ರಜೆ ಜೊತೆ ಸೇರಿಕೊಂಡು ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ಮಾಡಿಕೊಂಡಿದ್ದನು.  ಈ ಪ್ರಕರಣದಲ್ಲಿನ ಮತ್ತೊಬ್ಬ ವಿದೇಶಿ ಪ್ರಜೆ ತಲೆಮರೆಸಿಕೊಂಡಿದ್ದು ತನಿಖೆ ಮುಂದುವರೆದಿದೆ.

Facebook Comments