ಬಿ.ಟೆಕ್ ರಂಗ.. ಇದು ಲವ್ ಸ್ಟೋರಿ

ಈ ಸುದ್ದಿಯನ್ನು ಶೇರ್ ಮಾಡಿ

rangaಸ್ಯಾಂಡಲ್‍ವುಡ್‍ನಲ್ಲಿ ಹೊಸ ಚಿತ್ರಗಳ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ಸಾಲು ಸಾಲಾಗಿ ಚಿತ್ರಗಳ ಮುಹೂರ್ತ ನಡೆಯುತ್ತಿದ್ದು, ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿ.ಆರ್. ಚಂದ್ರಶೇಖರ್ ಅವರ ನಿರ್ಮಾಣದ ರಂಗ ಬಿ ಇ, ಬಿ ಟೆಕ್ ಚಿತ್ರದ ಮೂಹೂರ್ತ ಸಮಾರಂಭ ನೆರವೇರಿತು. ಈ ಚಿತ್ರದ ಮೊದಲ ದೃಶ್ಯಕ್ಕೆ ನಟ ನೀನಾಸಂ ಸತೀಶ್ ಅವರು ಕ್ಲಾಪ್ ಮಾಡಿದರೆ, ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಅವರೇ ಕ್ಯಾಮಾರ ಸ್ವಿಚ್ ಆನ್ ಮಾಡಿದರು. ಈ ಸಂದರ್ಭದಲ್ಲಿ ನಿರ್ಮಾಪಕರ ಪುತ್ರ ಸಿ. ನಂದಕಿಶೋರ್ ಕೂಡ ಹಾಜರಿದ್ದರು.ಚಿತ್ರದ ಬಗ್ಗೆ ಹೇಳಬೇಕೆಂದರೆ, ನಾಯಕ ರಂಗ ಒಬ್ಬ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ವಿದ್ಯಾವಂತ ಯುವಕ. ಯಾವುದೇ ಕಲ್ಮಶ ಇಲ್ಲದ ಬುದ್ದಿವಂತ ಹುಡುಗ ಕೂಡ. ಆತ ತನ್ನ ಜೀವನದಲ್ಲಿ ಏನೋ ಮಾಡಬೇಕೆಂದು ಹೋಗುತ್ತಾನೆ. ಇದರ ಮಧ್ಯೆ ಆತ ಒಬ್ಬ ಹುಡುಗಿಯ ಪ್ರೀತಿಯ ಬಲೆಗೆ ಬೀಳುತ್ತಾನೆ. ಆನಂತರ ಆತನ ಕನಸು ಹಾಗೂ ಪ್ರೀತಿಯ ನಡುವೆ ಹೇಗೆಲ್ಲ ದಾರಿ ಸಾಗುತ್ತ ಹೋಗುತ್ತದೆ ಎಂಬುದನ್ನು ರಂಗ ಬಿ ಇ, ಎಂ ಟೆಕ್ ಎಂಬ ಚಿತ್ರದಲ್ಲಿ ಹೇಳಲಾಗಿದೆ.

ಪ್ರೀತಿ ಪ್ರೇಮದ ಕತೆಯಲ್ಲಿ ಈಗಿನ ವಾಸ್ತವತೆ, ಯುವ ಜನಾಂಗದ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಕೂಡ ಈ ಚಿತ್ರದಲ್ಲಿ ಹೇಳಲಾಗಿದೆ. ಇವತ್ತಿನ ಪೀಳಿಗೆಗೆ ಹೊಂದಿಕೊಳ್ಳುವಂತ ಸಾಕಷ್ಟು ಸನ್ನಿವೇಶಗಳು ಈ ಚಿತ್ರದಲ್ಲಿವೆ. ಹತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿ ತಿಳಿದುಕೊಂಡು, ಸುಮಾರು 27 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಲ್ಲದೆ, ಚಿಟ್ಟೆ ಸಿನಿಮಾದಲ್ಲಿ ಖಳನಾಯಕನಾಗಿಯೂ ಕಾಣಿಸಿಕೊಂಡಿದ್ದ ನಾಗೇಶ್ ಕಾರ್ತಿಕ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಕೆಂಡಸಂಪಿಗೆಯಲ್ಲಿ ಮುಗ್ದ ಹುಡುಗನಾಗಿ, ಕಾಲೇಜು ಕುಮಾರ ಚಿತ್ರದಲ್ಲಿ ಬಿಂದಾಸ್ ಹುಡುಗನಾಗಿ ಕಾಣಿಸಿಕೊಂಡಿದ್ದ ವಿಕ್ಕಿ ವರುಣ್ ಈ ಚಿತ್ರದಲ್ಲಿ ಅವೆರಡಕ್ಕಿಂತಲೂ ವಿಭಿನ್ನ ಪಾತ್ರದಲ್ಲಿ ಅದರಲ್ಲೂ ಮೂರು ಶೇಡ್‍ಗಳಲ್ಲಿ ಬರೋ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಕನ್ನಡತಿ ಶಿಲ್ಪ ಮಂಜುನಾಥ್ ಈ ಚಿತ್ರದ ನಾಯಕಿ. ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ಅರುಣ್ ಬಾಲರಾಜ್, ಒಂದಲ್ಲಾ ಎರಡಲ್ಲಾ ಖ್ಯಾತಿಯ ತುಮಕೂರು ಮೋಹನ್, ರಿಚರ್ಡ್ ಲೂಯಿಸ್ ಪುತ್ರ ಜೀವನ್ ಲೂಯಿಸ್ ಜೊತೆಗೆ ಚಿತ್ರದಲ್ಲಿ ನಾಲ್ಕು ಹೊಸ ಹುಡುಗರಿಗೆ ಕೂಡ ಅವಕಾಶ ಮಾಡಿಕೊಡಲಾಗಿದೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಮಕ್, ಅಯೋಗ್ಯದಂಥ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಟಿ.ಆರ್. ಚಂದ್ರಶೇಖರ್ ಈ ಚಿತ್ರವನ್ನು ತನ್ನ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.
ಯುವ ಪೀಳಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸಸ್ಪೆನ್ಸ್ ಹಾಗೂ ಪ್ರೇಮಕಥೆ ಮುಖ್ಯ ಎಳೆಯಾಗಿದ್ದು, ಚಿತ್ರೀಕರಣಕ್ಕೆ ಹೊರಡಲು ತಂಡ ಸನ್ನದ್ಧವಾಗಿದೆ.

 

Facebook Comments