ಸಿ ಎಂ ಪಿ ಯಲ್ಲಿ ಸಿಎಂ ಪಾಲೋಳ್ಳುತ್ತಾರೋ ಇಲ್ಲವೋ ಹೊಸ ಕುತೂಹಲ

ಈ ಸುದ್ದಿಯನ್ನು ಶೇರ್ ಮಾಡಿ

cmಬೆಂಗಳೂರು, ಡಿ.15- ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ತಣಿಸಲು ಇದೇ 18ರಂದು ಬೆಳಗಾವಿಯಲ್ಲಿ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಭಾಗವಹಿಸುವ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಆಡಳಿತ ಪಕ್ಷದ ಶಾಸಕರಾಗಿದ್ದರೂ ಕಾಂಗ್ರೆಸ್‍ನವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್‍ನ ಸಚಿವರು ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಶಾಸಕರನ್ನು ಸಮಾಧಾನಪಡಿಸಲು ಮುಂದಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಅವರು ಡಿ.8ರಂದು ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ಕರೆದಿದ್ದರು. ಅದಕ್ಕೂ ಮುನ್ನ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಬಹಳಷ್ಟು ವಿಷಯಗಳು ಚರ್ಚೆಯಾಗಿದ್ದವು.
ಡಿ.8ರಂದು ನಡೆಯಬೇಕಿದ್ದ ಶಾಸಕಾಂಗ ಸಭೆಯನ್ನು ಡಿ.18ಕ್ಕೆ ಮುಂದೂಡಲಾಗಿದ್ದು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಅಲ್ಲಿಯೇ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಿದ್ದು, ಎಲ್ಲಾ ಶಾಸಕರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆಯಿಂದ ದಿನಾಂಕ ಮತ್ತು ಸ್ಥಳ ಬದಲಾವಣೆ ಮಾಡಲಾಯಿತು.ಆದರೆ, ಸಚಿವ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಕೆಲವು ಶಾಸಕರು ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಬೆಳಗಾವಿಯಲ್ಲೇ ಪ್ರತ್ಯೇಕ ಸಭೆಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಕುಮಾರಸ್ವಾಮಿ ಅವರು ಭಾಗವಹಿಸುತ್ತಾರೆ ಎಂದು ಹೇಳಲಾಗಿದ್ದರೂ ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿರುವ ಆಹ್ವಾನ ಸೂಚನಾ ಪತ್ರದಲ್ಲಿ ಕುಮಾರಸ್ವಾಮಿ ಅವರ ಹೆಸರಿಲ್ಲ. ಬದಲಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಭಾಗವಹಿಸುತ್ತಾರೆ ಎಂದು ನಮೂದಿಸಲಾಗಿದೆ. ಶಾಸಕಾಂಗ ಪಕ್ಷದ ನಾಯಕರ ಕಚೇರಿ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರೇ ಸಭೆಯ ನೇತೃತ್ವ ವಹಿಸುತ್ತಾರೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಭಾಗವಹಿಸುವುದರಿಂದ ಶಾಸಕರು ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಿ. ಅವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡುತ್ತಾರೆ. ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಶಾಸಕರ ಅಹವಾಲುಗಳ ಬಗ್ಗೆ ಕುಮಾರಸ್ವಾಮಿ ಅವರ ಗಮನ ಸೆಳೆಯಲಿದ್ದಾರೆ ಎಂಬ ಮಾಹಿತಿಗಳು ಕೇಳಿ ಬಂದಿವೆ.ಆದರೆ, ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಾಸಕಾಂಗ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.ಶಾಸಕರಿಗೆ ನೀಡುವ ಆಹ್ವಾನ ಸೂಚನಾ ಪತ್ರದಲ್ಲಿ ಕುಮಾರಸ್ವಾಮಿ ಅವರ ಹೆಸರು ಇಲ್ಲದೇ ಇರುವುದನ್ನು ಪ್ರಶ್ನಿಸಿದಾಗ, ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗುವುದು. ಅವರು ಭಾಗವಹಿಸುತ್ತಾರೋ ಇಲ್ಲವೋ ಕಾದು ನೋಡೋಣ ಎಂದರು.

ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸ ದ್ವಿಗುಣಗೊಂಡಿದ್ದು, ಮೈತ್ರಿ ಧರ್ಮದ ಹೊರತಾಗಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಆಲೋಚನೆಗಳು ಕೇಳಿ ಬರುತ್ತಿವೆ. ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇರಿಸು-ಮುರಿಸು ಉಂಟು ಮಾಡುತ್ತಿದೆ ಎಂದು ಹೇಳಲಾಗಿದೆ.
ಜತೆಗೆ ಹಿರಿಯ ಶಾಸಕರು ಕಾಲ ಕಾಲಕ್ಕೆ ಪ್ರತ್ಯೇಕ ಸಭೆಗಳನ್ನು ನಡೆಸಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗಳನ್ನು ಹೊರ ಹಾಕುತಿದ್ದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೌನವಾಗಿರುವುದು ಮತ್ತು ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸದೆ ವಿದೇಶಕ್ಕೆ ತೆರಳಿದ್ದು, ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಬಂದರೂ ಅಧಿವೇಶನದಲ್ಲಿ ಭಾಗವಹಿಸದೇ ಇರುವುದು ಮುಖ್ಯಮಂತ್ರಿಯವರ ಸಿಡಿಮಿಡಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಶಾಸಕಾಂಗ ಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

Facebook Comments