ಕೊಹ್ಲಿ ರಹಾನೆ ಜೊತೆಯಾಟ : ಭಾರತ ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

virat
ಪರ್ತ್, ಡಿ.15- ಅಡಿಲೇಡ್ ಟೆಸ್ಟ್‍ನ ಎರಡನೇ ದಿನವಾದ ಇಂದು ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಅಮೋಘ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 326 ರನ್‍ಗಳಿಗೆ ಸರ್ವಪತನಗೊಂಡ ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತೀಯ ಬ್ಯಾಟ್ಸ್‍ಮನ್‍ಗಳಾದ ಮುರಳಿವಿಜಯ್ (0 ರನ್) ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ (2 ರನ್ ) ಗಳಿಸಿ ಆಸೀಸ್‍ನ ವೇಗದ ಬೌಲರ್‍ಗಳಾದ ಮಿಚಲ್ ಸ್ಟ್ರಾಕ್ ಹಾಗೂ ಜೋಸ್ ಹೇಜಲ್‍ವುಡ್‍ಗೆ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಸೇರಿದರು.ಭಾರತ ತಂಡದ ಮೊತ್ತ 6 ರನ್‍ಗಳಾಗುವಷ್ಟರಲ್ಲೇ ಆರಂಭಿಕ 2 ವಿಕೆಟ್ ಕಳೆದುಕೊಮಡು ಸಂಕಷ್ಟದ ಪರಿಸ್ಥಿತಿಯಲ್ಲಿ ಧೃತಿಗೆಡದೆ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಭೋಜನ ವಿರಾಮದ ವೇಳೆಯವರೆಗೂ ಸಮಯೋಚಿತ ಆಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು.
ನಂತರ ಟೀ ವಿರಾಮದ ವೇಳೆಗೆ ತಂಡದ ಮೊತ್ತವನ್ನು ಶತಕದ ಅಂಚಿಗೆ ತಲುಪಿಸಲು ತಾಳ್ಮೆಯ ಆಟ ಮುಂದುವರೆದಿತ್ತು. ಒಂದೆಡೆ ಪೂಜಾರ ನಿಧಾನಗತಿಯಲ್ಲಿ ಆಸ್ಟ್ರೇಲಿಯಾ ಬೌಲರ್‍ಗಳನ್ನು ಲಘುವಾಗಿ ಪರಿಗಣಿಸದೆ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿದರು.

ಅಡಿಲೇಡ್ ಟೆಸ್ಟ್‍ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಪೂಜಾರ(24) ದೊಡ್ಡ ಮೊತ್ತ ಕಲೆ ಹಾಕುತ್ತಾರೆ ಎನ್ನುವಷ್ಟರಲ್ಲೇ ಅಸೀಸ್ ವೇಗಿ ಸ್ಟಾರ್ಕ್ ಅವರ ಆಕರ್ಷಕ ಎಸೆತದಲ್ಲಿ ಔಟಾಗುವ ಮೂಲಕ ನಿರಾಸೆಯಿಂದ ನಿರ್ಗಮಿಸಿದರು.  ನಂತರ ನಾಯಕ ಕೊಹ್ಲಿ ಜೊತೆಗೂಡಿದ ಅಜಿಂಕ್ಯಾ ರಹಾನೆ ತಂಡದ ಮೇಲಿದ್ದ ಒತ್ತಡವನ್ನು ನಿವಾರಿಸಲು ಕೆಲವೊಂದು ಆಕರ್ಷಕ ಹೊಡೆತಗಳ ಮೂಲಕ ತಮ್ಮ ಕಲಾತ್ಮಕ ಆಟ ಪ್ರದರ್ಶಿಸಿದರು.ನೋಡು ನೋಡುತ್ತಿದ್ದಂತೆಯೇ ತಂಡದ ಮೊತ್ತ ಏರುತ್ತಾ ಸಾಗಿತ್ತು. ನಾಯಕ ಕೊಹ್ಲಿ ಕೂಡ ಚೆಂಡಿನ ಲಯವನ್ನು ಬ್ಯಾಟ್ ಬೀಸತೊಡಗಿದರು. ಜವಾಬ್ದಾರಿಯುತ ಆಟ ಪ್ರದರ್ಶಿಸಿ ಅರ್ಧಶತಕ ಸಿಡಿಸಿ ಶತಕದ ಕಡೆ ದಾಪುಗಾಲಿಟ್ಟಿದ್ದರು.

ಇನ್ನೊಂದೆಡೆ ಅಜಿಂಕ್ಯಾ ರಹಾನೆ ಕೂಡ ದಿನದ ಆಟದ ಅಂತ್ಯದ ಸಂದರ್ಭದಲ್ಲಿ ಅರ್ಧ ಶತಕ ಸಿಡಿಸಿ ರನ್ ದಾಹ ತೀರಿಲ್ಲ ಎಂದು ತೋರಿಸಿದರು. ಅಂತಿಮವಾಗಿ ಭಾರತ 69 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 172ರನ್ ಕಲೆಹಾಕಿದ್ದು, ನಾಳಿನ ಆಟ ಕುತೂಹಲ ಕೆರಳಿಸಿದ್ದು ಭಾರತ ಅಸೀಸ್ ಮೊತ್ತವನ್ನು ಮೀರಿ ಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಆಸೀಸ್ 326ಕ್ಕೆ ಸರ್ವಪತನ:
ಮೊದಲ ದಿನದಾಟಕ್ಕೆ 6 ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಇಂದು 49 ರನ್‍ಗಳನ್ನು ಪೇರಿಸುವಷ್ಟರಲ್ಲಿ ಉಳಿದ 4 ವಿಕೆಟ್‍ಗಳನ್ನು ಕಳೆದುಕೊಂಡು 326 ರನ್‍ಗಳಿಗೆ ಸರ್ವಪತನ ವಾಯಿತು. ನಿನ್ನೆ ಅಜೇಯರಾಗಿ ಉಳಿದಿದ್ದ ನಾಯಕ ಪೇನ್ (38 ರನ್,5 ಬೌಂಡರಿ) ಹಾಗೂ ಪ್ಯಾಟ್ ಕುಮ್ಮಿನ್ಸ್ (19 ರನ್) ಬಿಟ್ಟರೆ ಉಳಿದ ಬಾಲಂಗೋಚಿಗಳ್ಯಾರೂ ಎರಡಂಕಿಯನ್ನು ಗಳಿಸಲು ಪರದಾಡಿದರು.

ಭಾರತ ತಂಡದ ಪರ ವೇಗಿಗಳಾದ ಇಶಾಂತ್ ಶರ್ಮಾ (4 ವಿಕೆಟ್), ಜಸ್‍ಪ್ರೀತ್ ಬೂಮ್ರಾ ಹಾಗೂ ಉಮೇಶ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್‍ಗಳೆನಿಸಿಕೊಂಡರೆ ಅರೆಕಾಲಿಕ ಬೌಲರ್ ಹನುಮವಿಹಾರಿ ಕೂಡ 2 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಇನ್ನಿಂಗ್ಸ್‍ಗೆ ಇತಿಶ್ರೀ ಹಾಡಿದರು.

Facebook Comments