ಜಗ್ಗೇಶ್ ಈಗ ಕನ್ನಡ ಮೇಷ್ಟ್ರು ..

ಈ ಸುದ್ದಿಯನ್ನು ಶೇರ್ ಮಾಡಿ

jaggeshಚಂದನವನದ ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದ ಮುಹೂರ್ತ ಸಮಾರಂಭ ನಗರದ ಕಂಠೀರವ ಸ್ಟುಡಿಯೋದಲ್ಲಿ ಬಹಳ ಅಚ್ಚುಕಟ್ಟಾಗಿ ನೆರವೇರಿತು. ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಆಗಮಿಸಿ ಶುಭಕೋರಿದರು. ಜಗ್ಗೇಶ್ ವಿಭಿನ್ನ ಪಾತ್ರಗಳತ್ತ ವಾಲುತ್ತಿದ್ದಾರೆ ಎನ್ನಬಹುದು. ಹಾಸ್ಯಚಿತ್ರಗಳ ನಡುವೆ ಒಂದಷ್ಟು ಜಾಗೃತಿ ಮೂಡಿಸುವಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂತಹದ್ದೇ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ತಮ್ಮ ಮಕ್ಕಳು ಕನ್ನಡ ಶಾಲೆಗಳಲ್ಲಿ ಓದಿದರೆ ಆತನಿಗೆ ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ಸಿಗುವುದಿಲ್ಲ ಎಂಬ ಬಲವಾದ ನಂಬಿಕೆ ನಮ್ಮ ಜನರಲ್ಲಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಅದೇ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಚಿತ್ರಕಥೆ ಹೆಣೆದಿರುವ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು. ಸಾಹಿತಿ ಕವಿರಾಜ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಮುಹೂರ್ತದ ನಂತರ ಮಾತನಾಡಿದ ಜಗ್ಗೇಶ್, ಕವಿರಾಜ್ ತುಂಬಾ ಚೆನ್ನಾಗಿ ಈ ಕಥೆಯನ್ನು ಮಾಡಿಕೊಂಡಿದ್ದಾರೆ. ಈ ವಿಷಯದಲ್ಲಿ ಹಿಂದೆ ನಾನು ಕೂಡ ಸಂದರ್ಭ ಎದುರಿಸಿದ್ದೇನೆ. ಈ ಕಾನ್ಸೆಪ್ಟ್ ಜನರಿಗೆ ಸರಿಯಾಗಿ ತಲುಪಿದರೆ ತುಂಬಾ ದೊಡ್ಡ ಆಂದೋಲನ ಉಂಟಾಗುತ್ತದೆ. ನಮ್ಮ ಸರ್ಕಾರಗಳು ಜನರಿಗೆ ಯಾವ ಸೌಲಭ್ಯಗಳನ್ನು ಕೊಡದಿದ್ದರೂ ವಿದ್ಯೆಯನ್ನು ಮಾತ್ರ ಉಚಿತವಾಗಿ ಕೊಡಿ. ಆತ ದೇಶವನ್ನು ಮುನ್ನಡೆಸುತ್ತಾನೆ. ಇದು ಈ ಚಿತ್ರದ ಕಾನ್ಸೆಪ್ಟ್. ಮಕ್ಕಳನ್ನು ಶಾಲೆಗೆ ಸೇರಿಸುವ ದಿನಗಳಲ್ಲಿ ಎಲ್ಲರೂ ಒಂಥರಾ ಬ್ಲೈಂಡ್ ಆಗಿರುತ್ತಾರೆ. ಲಕ್ಷಾಂತರ ಹಣ ಹೊಂದಿಸುವಲ್ಲಿ ತಂದೆಯಾದವ ಹೈರಾಣಾಗಿ ಹೋಗಿರುತ್ತಾನೆ. ಕನ್ನಡ ಶಾಲೆಯ ಶಿಕ್ಷಕನೊಬ್ಬನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ನಂತರ ನಿರ್ದೇಶಕ ಕವಿರಾಜ್ ಮಾತನಾಡಿ, ಈಗಿನ ಕಾಲಮಾನದಲ್ಲಿ ನಮ್ಮನ್ನು ಯಾರೋ ಸೆಂಟಿಮೆಂಟಲಿ ಆಳುತ್ತಿದ್ದಾರೆ. ಕನ್ನಡ ಶಾಲೆಯಲ್ಲಿ ಕಲಿತರೆ ಆತ ದಡ್ಡ ನಾಗುತ್ತಾನೆ ಎಂಬ ಮನಸ್ಥಿತಿಯನ್ನು ಫೋಷಕರಲ್ಲಿ ಕ್ರಿಯೇಟ್ ಮಾಡುತ್ತಿದ್ದಾರೆ. ಚಿತ್ರ ಶೇ.70ರಷ್ಟು ಕಾಮಿಡಿಯಾಗಿ ಸಾಗುತ್ತದೆ. ಈಗ ಒಂದರ ಹಿಂದೊಂದರಂತೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಅದರ ಹಿಂದೆ ಯಾರ ಹುನ್ನಾರವಿದೆ ಎಂಬುದನ್ನು ಇಲ್ಲಿ ಹೇಳುತ್ತಿದ್ದೇವೆ. ನಾಯಕಿ ಮೇಘನಾ ಕೂಡ ಕಥೆಗೆ ಒಂದು ಅಂಶವನ್ನು ಕೊಟ್ಟರು. ಅದರಿಂದ ಸ್ಕ್ರಿಪ್ಟ್‍ಗೆ ಹೊಸ ರೂಪ ಬಂತು. ಕ್ರಾಂತಿಗೆ ಒಂದು ಸಣ್ಣ ಬೀಜ ಬಿತ್ತುವ ಸಿನಿಮಾ ಎಂದು ಹೇಳಿಕೊಂಡರು.
ಈ ಚಿತ್ರವನ್ನುಉದಯ ಕುಮಾರ್ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಗುರುಕಿರಣ್ ಅವರ ಸಂಗೀತ ಕಾಳಿದಾಸ ಮೇಷ್ಟ್ರಿಗಿದೆ. ನಾಯಕಿ ಮೇಘನಾ ಗಾಂವಕರ್ ಮಾತನಾಡಿ, ನಾನು ಜಗ್ಗೇಶ್ ಅವರ ಹೆಂಡತಿಯಾಗಿ ಅಭಿನಯಿಸುತ್ತಿದ್ದೇನೆ. ಮಗನನ್ನು ಇಂಗ್ಲಿಷ್ ಶಾಲೆಗೆ ಸೇರಿಸಬೇಕು ಎಂದು ಹಂಬಿಸುವ ತಾಯಿ ಪಾತ್ರ ನನ್ನದು ಎಂದು ಹೇಳಿದರು.

ನಟಿ ಅಂಬಿಕಾ, ತಬಲಾ ನಾಣಿ ಕೂಡ ಈ ಚಿತ್ರದಲ್ಲಿದ್ದಾರೆ. ಗುಂಡ್ಲುಪೇಟೆ ಸುರೇಶ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ತಂದೆ-ತಾಯಂದಿರನ್ನು ಎಚ್ಚರಿಸುವುದರ ಜತೆಗೆ ಸರ್ಕಾರವು ಕೂಡ ಗಮನ ಹರಿಸಲೆಂದೇ ಈ ಚಿತ್ರ ಆರಂಭಗೊಳ್ಳುತ್ತಿದೆ ಎನ್ನಬಹುದು. ಮುಂದಿನ ದಿನಗಳಲ್ಲಿ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

Facebook Comments