ಕೋಟಿಲಿಂಗೇಶ್ವರದ ಶ್ರೀ ಸಾಂಬಶಿವ ಸ್ವಾಮೀಜಿ ನಿಧಾನ

ಈ ಸುದ್ದಿಯನ್ನು ಶೇರ್ ಮಾಡಿ

swmigjiಕೆಜಿಎಫ್,ಡಿ.15- ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪನೆಗೆ ಕಾರಣರಾದ ಶ್ರೀ ಸಾಂಬಶಿವ(70) ಸ್ವಾಮೀಜಿ ಅನಾರೋಗ್ಯದಿಂದ ಶಿವೈಕ್ಯರಾಗಿದ್ದಾರೆ. ಗುರುವಾರ ಮುಂಜನೆ ಹೃದಯಾಘಾತಗೊಳಗಾದ ಸ್ವಾಮೀಜಿಯನ್ನು ಬೆಂಗಳೂರಿನ ಮಹಾೀರ್ ಜೈನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.15 ಸುಮಾರಿಗೆ ದೈವಾಧೀನರಾಗಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಸ್ವಾಮೀಜಿಯವರ ಪಾರ್ಥೀವ ಶರೀರವನ್ನು ಬೆಂಗಳೂರಿನಿಂದ ಕಮ್ಮಸಂದ್ರಕ್ಕೆ ತರುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಸ್ವಾಮೀಜಿಯವರಿಗೆ ಪೂರ್ವಾಶ್ರಮದ ಪತ್ನಿ, ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನಿದ್ದಾರೆ. ಗೋಪಾಲಪ್ಪ ಎಂಬ ನಾಮಧೇಯದಿಂದ ಬೆಮಲ್‍ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅವರು, ನಂತರ ಬೆಂಗಳೂರಿನಲ್ಲಿ ವಸತಿ ಶಾಲೆಯನ್ನು ಪ್ರಾರಂಭಿಸಿದ್ದರು. ಮದರ್ ತೆರೇಸ ಹೆಸರಿನಲ್ಲಿ ವಿದ್ಯಾಸಂಸ್ಥೆ ಕಟ್ಟಿದ್ದರು. 1979ರಲ್ಲಿ ಆಧ್ಯಾತ್ಮಿಕ ಒಲವು ಹೊಂದಿ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದರು. ಕೂಡಲೇ ಕೋಟಿಲಿಂಗೇಶ್ವರ ದೇವಾಲಯಕ್ಕೆ ಅಡಿಪಾಯ ಹಾಕಿದರು. ನಂತರ ದೇವಾಲಯದ ಸಮುಚ್ಚಯದಲ್ಲಿ ಒಂದೊಂದೇ ದೇವಾಲಯಗಳು ಪ್ರಾರಂಭವಾದವು. ದೇವಾಲಯದ ವಿಸ್ತೀರ್ಣ ಹೆಚ್ಚಾಯಿತು.

ಸ್ವಾಮೀಜಿಯವರ ಆಸೆಯಂತೆ 108 ಅಡಿಗಳ ಬೃಹತ್ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಯಿತು. ನಂತರ 60 ಅಡಿ ಲಿಂಗ ಬೃಹತ್ ನಂದಿ ಸೇರಿದಂತೆ ಸಹಸ್ರಾರು ಲಿಂಗಗಳ ಪ್ರತಿಷ್ಠಾಪನೆಯಾದವು.
ದೇವಾಲಯದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಿದರೆ ಕೋರಿಕೆ ಈಡೇರುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಮಂದಿ ಲಿಂಗ ಪ್ರತಿಷ್ಠಾಪನೆ ಮಾಡಿದರು. ನಾಡಿನ ಮಂತ್ರಿಮಹೋದಯರು ಸೇರಿದಂತೆ ಗಣ್ಯಾತಿಗಣ್ಯರು ಈ ದೇವಾಲಯಕ್ಕೆ ಭೇಟಿ ನೀಡಿದ್ದರು.

Facebook Comments