ರಫೇಲ್: ಶೀಘ್ರ ಸಿಎಜಿ ವರದಿ ಸಲ್ಲಿಕೆಗೆ ಖರ್ಗೆ ಬಿಗಿಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Khargeನವದೆಹಲಿ, ಡಿ.15- ಫ್ರಾನ್ಸ್‍ನಿಂದ ಭಾರತವು 56,000 ಕೋಟಿ ರೂ. ಮೊತ್ತದಲ್ಲಿ 36 ರಫೇಲ್ ಜೆಟ್ ವಿಮಾನಗಳ ಖರೀದಿ ಒಪ್ಪಂದ ಕುರಿತು ಕೇಂದ್ರ ಸರ್ಕಾರದ ಅಧಿಕೃತ ಲೆಕ್ಕಪರಿಶೋಧಕರಾದ ನಿಯಂತ್ರಕರು ಮತ್ತು ಮಹಾಲೇಖಪಾರು (ಕಂಪ್ರೋಲರ್ ಅಂಡ್ ಅಡಿಟರ್ ಜನರಲ್-ಸಿಎಜಿ) ತನ್ನ ವರದಿಯಲ್ಲಿ ಸಲ್ಲಿಸಬೇಕಿದೆ.  ಇದೇ ವೇಳೆ ಆದಷ್ಟು ಶೀಘ್ರ ಜಿಎಜಿ ವರದಿ ಮತ್ತು ಅಕೌಂಟ್ಸ್ ಜನರಲ್ ಅವರ ವರದಿ ಸಲ್ಲಿಕೆಯಾಗಬೇಕೆಂದು ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರೂ ಆದ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಈ ಎರಡೂ ವರದಿಗಳು ಆದಷ್ಟು ಶೀಘ್ರ ಸಲ್ಲಿಕೆಯಾಗುವಂತೆ ಸಮಿತಿಯ ಸದಸ್ಯರು ಒತ್ತಡ ಹಾಕುವಂತೆ ಖರ್ಗೆ ಮನವಿ ಮಾಡಿದ್ದಾರೆ.  ಸುಪ್ರೀಂಕೋರ್ಟ್ ಬಗ್ಗೆ ನಮಗೆ ಗೌರವವಿದೆ. ಆದರೆ, ಕೇಂದ್ರ ಸರ್ಕಾರ ಸಿಎಜಿ ವರದಿ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿದ ಖರ್ಗೆ, ಇದಕ್ಕಾಗಿ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ರಫೇಲ್ ಹಗರಣದ ಬಗ್ಗೆ ಸತ್ಯಾಂಶ ಹೊರ ಬೀಳಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯೇ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್‍ನ ಬಿಗಿಪಟ್ಟು. ಈಗಲೂ ಕೂಡ ನಾವು ಇದನ್ನೇ ಹೇಳುತ್ತೇವೆ. ಜೆಪಿಸಿ ತನಿಖೆಯಿಂದ ಮಾತ್ರ ಈ ಬಾರಿ ಅವ್ಯವಹಾರದ ಸತ್ಯಾಂಶ ಹೊರ ಬೀಳಲಿದೆ ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

ಜನವರಿ ಅಂತ್ಯಕ್ಕೆ ಸಿಎಜಿ ವರದಿ ಸಲ್ಲಿಕೆ:
ಸೆಪ್ಟೆಂಬರ್ 2016ರಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವೆ ರಫೇಲ್ ಫೈಟರ್ ಜೆಟ್‍ಗಳ ಖರೀದಿ ಒಪ್ಪಂದವಾಗಿತ್ತು. ಕಳೆದ ವರ್ಷದಿಂದ ಸಿಎಜಿ ಈ ಕುರಿತ ಲೆಕ್ಕಪತ್ರ ಪರಿಶೀಲನೆ ಮತ್ತು ಲೆಕ್ಕ ಪರಿಶೋಧನೆ ನಡೆಸುತ್ತಿದೆ. ಟೆಂಡರ್ ಬಿಡ್ಡಿಂಗ್, ದರ ನಿಗದಿ, ಹಣಕಾಸು ಒಪ್ಪಂದ ಮೊದಲಾದ ವಿಷಯಗಳ ಕುರಿತು ಸಿಎಜಿ ಪರಿಶೀಲನೆ ನಡೆಸುತ್ತಿದೆ. ಇದು ಅಂತಿಮ ಹಂತದಲ್ಲಿದ್ದು, ಜನವರಿ ಅಂತ್ಯಕ್ಕೆ ತನ್ನ ವರದಿ ಸಲ್ಲಿಸಲಿದೆ.

ಸರ್ಕಾರಕ್ಕೆ ಈ ವರದಿ ತಲುಪಿದ ನಂತರ ಅದನ್ನು ಸಂಸತ್ತಿನ ಮುಂದೆ ಮಂಡಿಸಬೇಕಾದ ದಿನಾಂಕ ಮತ್ತು ಸಮಯ ನಿಗದಿಯಾಗಲಿದೆ. ಇದು ಸಂಸತ್‍ನಲ್ಲಿ ಮಂಡನೆಯಾಗಿ ಅನುಮೋದನೆ ದೊರೆತ ನಂತರ ಮುಂದಿನ ಕ್ರಮಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಪಿಎಸಿಗೆ ಕಳುಹಿಸಲಾಗುತ್ತದೆ.
ಪಿಎಸಿ ಈ ವರದಿಯನ್ನು ಪರಿಶೀಲಿಸಿ ಅದರಲ್ಲಿ ಇರಬಹುದಾದ ಅಂಶಗಳು ಮತ್ತು ನ್ಯೂನ್ಯತೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತದೆ.

Facebook Comments