ನಾಳೆಯಿಂದ ರಂಗೇರಲಿದೆ ಬೆಳಗಾವಿ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

sessionಬೆಂಗಳೂರು, ಡಿ.16- ಈವರೆಗೂ ಅಷ್ಟೇನೂ ಕಳೆಗಟ್ಟದಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ನಾಳೆಯಿಂದ ರಂಗೇರಲಿದೆ. ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿರುವ ಬಿಜೆಪಿ ಉಭಯ ಸದನಗಳಲ್ಲಿ ಉತ್ತರ ಕರ್ನಾಟಕ ಹಾಗೂ ಕೆಲವು ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ. ಕಳೆದ ಸೋಮವಾರದಿಂದ ಆರಂಭವಾದ ಕಲಾಪದಲ್ಲಿ ಈವರೆಗೂ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ. ಕೇವಲ ಬರಗಾಲದ ಬಗ್ಗೆ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಬೆಳಕು ಚೆಲ್ಲಿದ್ದಾರೆ. ಅದನ್ನು ಹೊರತು ಪಡಿಸಿದರೆ ಕಬ್ಬು ಬೆಳೆಗಾರರು, ಉತ್ತರ ಕರ್ನಾಟಕದ ಸಮಸ್ಯೆಗಳು, ರೈತರ ಆತ್ಮಹತ್ಯೆ, ರೈತರ ಬೆಳೆ ಸಾಲ ಮನ್ನಾ ಸೇರಿದಂತೆ ಹತ್ತು, ಹಲವು ವಿಷಯಗಳು ನಾಳೆಯಿಂದ ಸದನದಲ್ಲಿ ಪ್ರತಿಧ್ವನಿಸಲಿವೆ

ನಾಳೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 35 ಸಾವಿರ ಕೋಟಿಷ್ಟು ಭ್ರಷ್ಟಾಚಾರ ನಡೆದಿದೆ ಎಂಬ ಸಿಎಜಿ ವರದಿಯನ್ನು ಮುಂದಿಟ್ಟು ಕೊಂಡು ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮುಜುಗರ ಉಂಟು ಮಾಡಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಇನ್ನು ಉಳಿದಂತೆ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಂಭವವಿದೆ. ಮುಖ್ಯವಾಗಿ ಈ ಭಾಗದ ನೀರಾವರಿ ಯೋಜನೆಗಳು, ಕೃಷಿ, ಕೈಗಾರಿಕೆ ಸೇರಿದಂತೆ ಅನ್ನದಾತ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟು ಕೊಂಡು ಸದನದಲ್ಲಿ ಚರ್ಚಿಸಿ ಪರಿಹಾರ ಒದಗಿಸಲು ಸರ್ಕಾರವನ್ನು ಒತ್ತಾಯಿಸಲಿದೆ. ಹುಬ್ಬಳ್ಳಿ, ಧಾರವಾಡ, ಗದಗ ಹಾಗೂ ಬೆಳಗಾವಿ ಮಹಾನಗರಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿ ನೀರು ವಿವಾದವನ್ನು ಪರಿಹರಿಸಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂಬ ಬೇಡಿಕೆಯನ್ನು ಬಿಜೆಪಿ ಮುಂದಿಡಲಿದೆ.

ಗೋವಾ ಸರ್ಕಾರ ಈ ಯೋಜನೆಗೆ ಎಷ್ಟೇ ಅಡ್ಡಿ ಪಡಿಸಿದರೂ ಕಾನೂನಿನ ಚೌಕಟ್ಟಿನಲ್ಲಿಯೇ ಮಹದಾಯಿ ನದಿ ನೀರು ಯೋಜನೆಯನ್ನು ಅನುಷ್ಠಾನಗೊಳಿಸಿ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಸರ್ಕಾರದ ಗಮನ ಸೆಳೆಯಲಿದೆ. ಉಳಿದಂತೆ ಈ ಬಾರಿ ಬರ ಪೀಡಿತ ತಾಲ್ಲೂಕುಗಳಲ್ಲಿ ಉತ್ತರ ಕರ್ನಾಟಕ ಭಾಗವೇ ಹೆಚ್ಚಾಗಿರುವುದರಿಂದ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಕೃಷ್ಣಾನದಿ ನೀರು ಸದ್ಬಳಕೆ, ಶಾಶ್ವತ ಪುನರ್ವÀಸತಿ ಸೇರಿದಂತೆ ಮತ್ತಿತರ ಸಮಸ್ಯೆಗಳು ಕೂಡ ಚರ್ಚೆಯಾಗಲಿವೆ.

ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ:ಬೆಳಗಾವಿಯ ಹೊರ ಭಾಗದಲ್ಲಿ ನಿರ್ಮಾಣ ವಾಗಿರುವ ಸುವರ್ಣ ಸೌಧದಲ್ಲಿ ಪೂರ್ತಿ ಕಾರ್ಯ ನಿರ್ವಹಿಸುವಂತೆ ಬೆಂಗಳೂರಿನಿಂದ ಕೆಲವು ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವಂತೆ ಬಿಜೆಪಿ ಪಟ್ಟು ಹಿಡಿಯಲಿದೆ. ಸುವರ್ಣ ಸೌಧ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತ ವಾಗದೆ ವರ್ಷ ಪೂರ್ತಿ ಕಾರ್ಯನಿರ್ವಹಿಸಬೇಕು. ನೀರಾವರಿ, ಕಂದಾಯ, ಲೋಕೋಪಯೋಗಿ ಸೇರಿದಂತೆ ಕೆಲವು ಇಲಾಖೆಗಳನ್ನು ಸುವರ್ಣ ಸೌಧಕ್ಕೆ ವರ್ಗಾ ಯಿಸಬೇಕು, ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ಕೆಲವು ಕಚೇರಿಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸುವುದಾಗಿ ಸದನದಲ್ಲೇ ಘೋಷಣೆ ಮಾಡಿದ್ದರು. ಆದರೆ, ಘೋಷಣೆ ಕಾಗದದ ಮೇಲೆ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎಂಬ ಆರೋಪವಿದೆ.

ಗಡಿವಿವಾದವನ್ನು ಮುಂದಿಟ್ಟುಕೊಂಡು ಕರ್ನಾಟಕದ ವಿರುದ್ಧ ಪದೇ ಪದೇ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಹಾಗೂ ಪ್ರತಿ ಚುನಾವಣೆಯಲ್ಲೂ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡಿಗರಿಗೆ ಇರಿಸುಮುರುಸು ಉಂಟು ಮಾಡುವ ಎಂಇಎಸ್ ಪುಂಡಾಟಕ್ಕೆ ಕಡಿವಾಣ ಹಾಕಬೇಕಾದರೆ ಬೆಳಗಾವಿಯ ಸುವರ್ಣ ಸೌಧ ವರ್ಷಪೂರ್ತಿ ಕಾರ್ಯ ನಿರ್ವಹಿಸಬೇಕು. ಇದರಿಂದ ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಗೊತ್ತಾಗುತ್ತದೆ. ಬೆಳಗಾವಿ ಜನತೆ ಜತೆಗೆ ಕರ್ನಾಟಕ ಇರಲಿದೆ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಕಚೇರಿಗಳ ವರ್ಗಾವಣೆಗೆ ಬಿಜೆಪಿ ಸದನದಲ್ಲಿ ಒತ್ತಾಯಿಸಲಿದೆ.
ಒಟ್ಟಿನಲ್ಲಿ ನಾಳೆಯಿಂದ ಮುಂದುವರೆದ ಕಲಾಪ ವಿಧಾನಮಂಡಲದ ಉಭಯ ಸದನಗಳಲ್ಲಿ ರಂಗೇರುವುದರಲ್ಲಿ ಯಾವ ಅನುಮಾನವೂ ಇಲ್ಲ.

Facebook Comments