ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಬದಲಾವಣೆ?

ಈ ಸುದ್ದಿಯನ್ನು ಶೇರ್ ಮಾಡಿ

Muralidhar Raoಬೆಂಗಳೂರು, ಡಿ.16- ಪಕ್ಷ ಸಂಘಟನೆ, ಶಾಸಕರು ಹಾಗೂ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರನ್ನು ಬದಲಾವಣೆ ಮಾಡಬೇಕೆಂದು ಬಿಜೆಪಿ ಘಟಕ ವರಿಷ್ಟರಿಗೆ ದೂರು ನೀಡಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ರಾಜ್ಯದಿಂದ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಅನೇಕರು ಮುರಳೀಧರರಾವ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಮುರಳೀಧರರಾವ್‍ಗೆ ಉಸ್ತುವಾರಿ ವಹಿಸುವಂತಹ ಚಾಕಚಕ್ಯತೆ, ಬರಲಿರುವ ಲೋಕಸಭೆ ಚುನಾವಣೆಗೆ ಪ್ರತಿಪಕ್ಷಗಳ ವಿರುದ್ಧ ರಣತಂತ್ರ ರೂಪಿಸುವುದು,ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅವರು ವಿಫಲರಾಗಿರುವುದರಿಂದ ಕೂಡಲೇ ಅವರನ್ನು ಉಸ್ತುವಾರಿಯಿಂದ ಮುಕ್ತಿಗೊಳಿಸಿ ಬೇರೊಬ್ಬರಿಗೆ ಈ ಜವಾಬ್ದಾರಿ ವರ್ಗಾಯಿಸುವಂತೆ ಕೋರಿದ್ದಾರೆ.
ರಾಜ್ಯ ನಾಯಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಸದಸ್ಯದಲ್ಲೇ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಸರಿಯಾದ ಸಮಯದಲ್ಲಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಮುರಳೀಧರರಾವ್ ಕೇವಲ ಯಡಿಯೂರಪ್ಪ ಅವರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಾರೆಯೇ ಹೊರತು, ಎಲ್ಲ ಪದಾಧಿಕಾರಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಿಲ್ಲ. ಟಿಕೆಟ್ ಹಂಚಿಕೆ, ಪದಾಧಿಕಾರಿಗಳ ನೇಮಕಾತಿ, ನಾಯಕರಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷ, ಭಿನ್ನಾಭಿಪ್ರಾಯ ಯಾವುದನ್ನೂ ಪರಿಹರಿಸಲು ಮುಂದಾಗುವುದಿಲ್ಲ. ಕೇವಲ ಬೇರೊಬ್ಬರ ಅಣತಿಯಂತೆ ಕೆಲಸ ನಿರ್ವಹಿಸುತ್ತಾರೆ. ಹೀಗಾದರೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ನಾವು ಹೇಗೆ ಪಕ್ಷ ಸಂಘಟಿಸಬೇಕೆಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ವರಿಷ್ಠರಿಗೂ ಅಸಮಾಧಾನ:ಇನ್ನು ಮುರಳೀಧರರಾವ್ ಕಾರ್ಯವೈಖರಿಗೆ ಕೇಂದ್ರ ವರಿಷ್ಠರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲತಃ ತೆಲಂಗಾಣ ರಾಜ್ಯದವರಾದ ಅವರು, ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. 2014ರಲ್ಲಿ ನಾಲ್ಕು ಸ್ಥಾನ ಪಡೆದಿದ್ದ ಬಿಜೆಪಿ, ಇತ್ತೀಚೆಗೆ ಮುಕ್ತಾಯ ಗೊಂಡ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದರೂ ಪಕ್ಷಕ್ಕೆ ಯಾವುದೇ ರೀತಿಯ ಸಹಾಯವಾಗಲಿಲ್ಲ.
ಕಡೆ ಪಕ್ಷ ತಮ್ಮ ತವರು ಜಿಲ್ಲೆಯಲ್ಲೇ ಪಕ್ಷ ಸಂಘಟಿಸಲು ಮುರಳೀಧರರಾವ್ ವಿಫಲರಾಗಿದ್ದಾರೆ ಎಂಬ ಕಾರಣಕ್ಕಾಗಿ ಕೇಂದ್ರ ನಾಯಕರೇ ಅಸಮಾಧಾನ ಹೊರ ಹಾಕಿದ್ದಾರೆ.
ಬರಲಿರುವ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿರುವುದರಿಂದ ಬೇರೊಬ್ಬರಿಗೆ ಈ ಉಸ್ತುವಾರಿಯನ್ನು ನೀಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಹಾಗೂ ಪಿಯೂಶ್ ಗೋಯೇಲ್ ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.
ಕೇಂದ್ರದಲ್ಲಿ ಪ್ರಬಲ ಖಾತೆಯನ್ನು ಹೊಂದಿದ್ದರೂ ಪ್ರಕಾಶ್ ಜಾವೇಡ್ಕರ್ ಮತ್ತು ಪಿಯೂಶ್‍ಗೋಯೆಲ್ ಮೂರು ತಿಂಗಳು ರಾಜ್ಯದಲ್ಲಿ ಬೀಡು ಬಿಟ್ಟು ಪಕ್ಷ ಸಂಘಟನೆ, ಪ್ರಣಾಳಿಕೆ ತಯಾರಿಕೆ, ಚುನಾವಣಾ ಪ್ರಚಾರ, ಎದುರಾಳಿ ಪಕ್ಷದ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರು.
ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾದರೂ 104 ಸ್ಥಾನ ಗಳಿಸುವಲ್ಲಿ ಜಾವೇಡ್ಕರ್ ಮತ್ತು ಪಿಯೂಶ್ ಗೋಯೆಲ್ ರೂಪಿಸಿದ ರಣತಂತ್ರ ಒಂದಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುರಳೀಧರರಾವ್ ಅವರನ್ನು ಬದಲಾಯಿಸಿ ಈ ಇಬ್ಬರಲ್ಲಿ ಯಾರಿಗಾದರೂ, ಇಲ್ಲವೇ ಆರ್‍ಎಸ್‍ಎಸ್ ಹಿನ್ನೆಲೆಯುಳ್ಳ ಹಿರಿಯರೊಬ್ಬರಿಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡುವ ಬಗ್ಗೆ ಕೇಂದ್ರ ನಾಯಕರು ಚಿಂತನೆ ನಡೆಸಿದ್ದಾರೆ.
ಬಿಎಸ್‍ವೈ-ಸಂತೋಷ್‍ಗೆ ಹೆಚ್ಚಿನ ಜವಾಬ್ದಾರಿ:ಬರಲಿರುವ ಲೋಕಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಡೆ ಪಕ್ಷ 15ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಇದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ಗೆ ಹÉಚ್ಚಿನ ಜವಾಬ್ದಾರಿ ನೀಡುವ ಚಿಂತನೆಯಲ್ಲಿದೆ.
ಈವರೆಗೂ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ನೋಡಿಕೊಳ್ಳುತ್ತಿದ್ದ ಅನಂತ್‍ಕುಮಾರ್ ನಿಧನರಾದ ಹಿನ್ನೆಲೆ ಯಲ್ಲಿ ಅವರ ಜಾಗಕ್ಕೆ ಸಂತೋಷ್ ಅವರನ್ನು ನೇಮಿಸಿ, ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನೆಡಸುವ ಜವಾಬ್ದಾರಿಯನ್ನು ನೀಡಲಾಗುತ್ತಿದೆ.
ಅಭ್ಯರ್ಥಿಗಳ ಆಯ್ಕೆ, ಯಾವ ಯಾವ ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಿಸಬೇಕು, ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರದ ವಿರುದ್ಧ ರಣತಂತ್ರ ರೂಪಿಸಿವುದು ಹಾಗೂ ಲೋಕಸಭೆ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಈ ಇಬ್ಬರು ನಾಯಕರ ಹೆಗಲಿಗೆ ಹೊರಿಸುವ ಚಿಂತನೆ ನಡೆದಿದೆ.
ಯಡಿಯೂರಪ್ಪ ಮತ್ತು ಸಂತೋಷ್ ಅವರುಗಳು ಹಾವು, ಮುಂಗುಸಿಯಂತೆ ಇದ್ದರೂ ಲೋಕಸಭೆ ಚುನಾವಣೆ ಕಾರಣಗಳಿಗಾಗಿ ಎಲ್ಲಾ ವೈಮನಸ್ಸುಗಳನ್ನು ಮರೆತು ಪಕ್ಷ ಸಂಘಟಿಸಬೇಕೆಂಬ ನಿರ್ದೇಶನ ಕೇಂದ್ರದಿಂದ ಈಗಾಗಲೇ ಬಂದಿದೆ.
ಇಬ್ಬರಿಗೂ ಜವಾಬ್ದಾರಿ ನೀಡುವುದರಿಂದ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿ ಪ್ರಾಯಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿಯೇ ಕೇಂದ್ರ ನಾಯಕರು ಸದ್ಯ ದಲ್ಲೇ ಪಕ್ಷದಲ್ಲಿ ಒಂದಿಷ್ಟು ಸಣ್ಣಪುಟ್ಟ ಬದ ಲಾವಣೆ ಮಾಡಿ ಕೆಲವರಿಗೆ ಪ್ರಮುಖ ಜವಾಬ್ದಾರಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Facebook Comments