ಅಧಿವೇಶನಕ್ಕೆ ಹೋದ ಸರ್ಕಾರೀ ಸಿಬ್ಬಂದಿಗಳು; ಗೋವಾದಲ್ಲಿ ಮೋಜುಮಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ್
ಸಾಂದರ್ಭಿಕ ಚಿತ್ರ್

ಬೆಳಗಾವಿ,ಡಿ.16-ಕುಂದಾನಗರಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಬೆಂಗಳೂರಿನಿಂದ ಆಗಮಿಸಿದ ಸಚಿವಾಲಯದ ಸಿಬ್ಬಂದಿಗಳು ಮೋಜುಮಸ್ತಿ ಮಾಡುವ ಮೂಲಕ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿದ್ದಾರೆ. ನಿನ್ನೆ ಶನಿವಾರ ಇಂದು ಭಾನುವಾರ ರಜೆ ದಿನವಾದ್ದರಿಂದ ಬೆಂಗಳೂರಿನಿಂದ ಆಗಮಿಸಿದ್ದ ಸಚಿವಾಲಯದ ಸಿಬ್ಬಂದಿಗಳು ಬೆಳಗಾವಿ ಹೊರವಲಯದ ರೆಸಾರ್ಟ್ ಹಾಗೂ ಗೋವಾದ ಜೂಜು ಅಡ್ಡೆಗೆ ಹೋಗಿ ಮೋಜುಮಸ್ತಿ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಿಯಮಗಳ ಪ್ರಕಾರ ಸಚಿವಾಲಯದ ಸಿಬ್ಬಂದಿ ಎಲ್ಲಿಗೆ ಹೋಗಬೇಕಾದರೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ, ವಿಧಾನಸಭೆ ಕಾರ್ಯದರ್ಶಿಗಳ ಅನುಮತಿ ಪಡೆಯಬೇಕು. ಆದರೆ ಯಾವುದೇ ಅಧಿಕಾರಿಗಳು ಅವರ ಒಪ್ಪಿಗೆ ಪಡೆಯದೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ವಿಧಾನಮಂಡಲದ ಸದನ ಕಲಾಪ ಸೋಮವಾರಕ್ಕೆ ಮುಂದೂಡುತ್ತಿದ್ದಂತೆ ಬೆಂಗಳೂರಿನಿಂದ ಬಂದಿದ್ದ ಸಚಿವಾಲಯದ ಸಿಬ್ಬಂದಿಗಳು ರೆಸಾರ್ಟ್ ಮತ್ತು ವೀಕೆಂಡ್ ಪ್ರಯುಕ್ತ ರಜೆಯ ಮಜಕ್ಕಾಗಿ ಕೆಸಿನೋಗೆ ತೆರಳಿದ್ದಾರೆ.  ಕೆಲವರು ಸರ್ಕಾರಿ ವಾಹನಗಳಲ್ಲೇ ಹೋದರೆ ಇನ್ನು ಕೆಲವರು ಖಾಸಗಿ ವಾಹನಗಳಲ್ಲಿ ಬೆಳಗಾವಿ ಹೊರವಲಯದ ರೆಸಾರ್ಟ್ ಮತ್ತು ಗೋವಾದ ಕೆಸಿನೋಕ್ಕೆ ತೆರಳಿದ್ದಾರೆ. ಗೋವಾದ ಫ್ರೈಡ್ ಎಂಬ ಕೆಸಿನೋ ಮುಂದೆ ಅಧಿಕಾರಿಗಳು ಮೋಜು ಮಸ್ತಿ ಮಾಡುತ್ತಿರುವುದು ಕಂಡುಬಂದಿದೆ. ಕೆಲವರು ಕೈಯಲ್ಲಿ ಮದ್ಯದ ಬಾಟ್ಲು, ಸಿಗರೇಟ್ ಸೇವನೆ ಮಾಡುತ್ತಿರುವ ದೃಶ್ಯವು ಸೆರೆ ಹಿಡಿಯಲಾಗಿದೆ. ವಿಶೇಷವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವಾಲಯ ಅಧಿಕಾರಿಗಳು ಮತ್ತು ಕೆಲವು ಭದ್ರತಾ ಸಿಬ್ಬಂದಿಯವರು ಕೆಸಿನೋ ಮುಂದೆ ನೃತ್ಯ ಮಾಡುತ್ತಿರುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಅಧಿಕಾರಿಗಳ ಮೋಜುಮಸ್ತಿ ಎಲ್ಲೆಡೆ ವೈರಲ್ಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ತೀರ ಮುಜುಗರ ಉಂಟಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇರುವ ಸಂದರ್ಭದಲ್ಲಿ ಶಾಸಕರ ವಿದೇಶಿ ಪ್ರವಾಸಕ್ಕೆ ಸರ್ಕಾರ ಕಡಿವಾಣ ಹಾಕಿದೆ. ಇನ್ನೊಂದೆಡೆ ದುಂದುವೆಚ್ಚಗಳನ್ನು ಮಾಡದಂತೆಯೂ ಸೂಚಿಸಲಾಗಿದೆ. ಆದರೆ ಇಲ್ಲಿ ಅಧಿಕಾರಿಗಳು ಯಾರೊಬ್ಬರ ಅನುಮತಿಯೂ ಇಲ್ಲದೆ ರೆಸಾರ್ಟ್ ಮತ್ತು ಜೂಜು ಅಡ್ಡೆಯಲ್ಲಿ ಬೀಡುಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಕೆಲವು ಅಧಿಕಾರಿಗಳು ಅಧಿವೇಶನ ಇನ್ನು ಐದು ದಿನ ಇರುವ ಕಾರಣ ಬೇಕಾದ ದಾಖಲೆಗಳು ಹಾಗೂ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದರೆ ಕೆಲವರು ಜೂಜು ಅಡ್ಡೆಗೆ ತೆರಳಿ ಮಸ್ತಿಮಾಡುವ ಮೂಲಕ ಸರ್ಕಾರದ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಅಧಿಕಾರಿಗಳ ಈ ದುಂಡಾವರ್ತನೆಗೆ ಕಡಿವಾಣ ಹಾಕುವ ಉದ್ದೇಶದಿಂದ ನಾಳೆ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ವಿಧಾನಸಭೆಯ ಸ್ಪೀಕರ್ ಮತ್ತು ವಿಧಾನಪರಿಷತ್ ಸಭಾಪತಿಗಳಿಗೆ ಮನವಿ ಮಾಡುವ ಸಂಭವವಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವು ವೈರಲ್ಲಾಗುತ್ತಿರುವುದರಿಂದ ಅಧಿಕಾರಿಗಳ ಆಟಾಟೋಪಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.

Facebook Comments