ಆಸ್ಪತ್ರೆ ವೈದ್ಯರ ಲೋಪವಿಲ್ಲ ಆರೋಗ್ಯ ಸಚಿವರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Shivanand Patilಮೈಸೂರು, ಡಿ.16- ದೇಗುಲ ಪ್ರಸಾದ ಸೇವಿಸಿ ಮೃತಪಟ್ಟ ದುರಂತ ಪ್ರಕರಣದಲ್ಲಿ ವೈದ್ಯರ ಕೊರತೆ ಹಾಗೂ ಆಸ್ಪತ್ರೆಯಲ್ಲಿನ ಲೋಪ ಇನ್ನಿತರ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ, ವಿಷದ ಪ್ರಮಾಣ ಹೆಚ್ಚಾಗಿ ಹಲವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು. ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಮಿಶ್ರಿತ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ ನಂತರ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಮತ್ತಿತರರು ಜಂಟಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದರು.

ಘಟನೆ ಸಂಭವಿಸಿದ ಕೂಡಲೇ ಭಯಭೀತರಾಗಿದ್ದಾರೆ. ಏಕಾಏಕಿ 100ಕ್ಕೂ ಹೆಚ್ಚು ಮಂದಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಧಾವಿಸಿದಾಗ ಏನಾಗಿದೆ ಎಂದು ವೈದ್ಯರು ತಿಳಿದುಕೊಳ್ಳುವಷ್ಟರಲ್ಲೇ ಇಬ್ಬರು ಸಾವ ನ್ನಪ್ಪಿದ್ದಾರೆ.ಮಾಹಿತಿ ಪಡೆದ ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಿದ್ದಾರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ. ವೈದ್ಯಕೀಯ ವ್ಯವಸ್ಥೆಯ ಲೋಪ ಮತ್ತು ವೈದ್ಯರ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜೆ.ಎಸ್.ಎಸ್.ಆಸ್ಪತ್ರೆಯಲ್ಲಿ ಇಬ್ಬರು, ಅಪೋಲೋ ಆಸ್ಪತ್ರೆಯಲ್ಲಿ ಮೂವರು ಹಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಒಬ್ಬರು ಸೇರಿದಂತೆ 8 ಮಂದಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ಹಲವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಅವರನ್ನು ಡಿಸ್ಚಾರ್ಜ್ ಮಾಡುವುದಿಲ್ಲ. ಇನ್ನೂ 15 ದಿನ ಇಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಈ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತೇನೆ.ಮೇಲ್ನೋಟಕ್ಕೆ ರಾಸಾಯನಿಕ ವಿಷ ಮಿಶ್ರಣವಾಗಿರುವುದು ಕಂಡು ಬಂದಿದೆ. ಎಫ್‍ಎಸ್‍ಎಲ್ ವರದಿ ನಂತರ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು. ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಇತ್ತೀಚೆಗೆ ಪ್ರಖ್ಯಾತವಾಗಿದ್ದ ದೇವಸ್ಥಾನಕ್ಕೆ ಆದಾಯ ಹೆಚ್ಚಾಗಿತ್ತು. ಇದರ ಕಿತ್ತಾಟದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ. ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಶಾಸಕ ನರೇಂದ್ರ ಮಾತನಾಡಿ, ದೇವಸ್ಥಾನದಲ್ಲಿ ಆದಾಯ ಹೆಚ್ಚಾಗಿದೆ, ಗುಂಪುಗಳೂ ಹೆಚ್ಚಾಗಿವೆ. ಈ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎಂದು ಒತ್ತಾಯಿಸಿದರು.ಎರಡು ಗುಂಪುಗಳ ನಡುವಿನ ಸಂಘರ್ಷದಿಂದ ಈ ಘಟನೆ ನಡೆದಿದೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲ. ಹಾಗಾಗಿ ಈ ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದು ಹೇಳಿದರು.
ಸಂಸದ ಧೃವನಾರಾಯಣ್ ಮಾತನಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಹೇಳಿದರು.

Facebook Comments