ಗೋತ್ರದ ಬಗ್ಗೆ ತಡವಾಗಿ ಜ್ಞಾನೋದಯ ರಾಹುಲ್ ವಿರುದ್ಧ ಯೋಗಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

yogiಫೈಜಾಬಾದ್(ಪಿಟಿಐ),ಡಿ.16-ರಾಷ್ಟ್ರ ರಾಜಕಾರಣದಲ್ಲಿ ಮುಂಚೂಣಿಗೆ ಬರಲು ತವಕಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಇದೀಗ ತಮ್ಮ ಗೋತ್ರ ಮತ್ತು ಜನಿವಾರದ ಬಗ್ಗೆ ಜ್ಞಾನೋದಯವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ. ಸನಾತನ ಧರ್ಮದ ಮುಖವಾಡ ಹಾಕಿಕೊಳ್ಳದಿದ್ದರೆ ರಾಜಕಾರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಡವಾಗಿ ಅರ್ಥ ಮಾಡಿಕೊಂಡಿರುವವರು ಇದೀಗ ತಮ್ಮ ಗೋತ್ರ-ಜನಿವಾರವನ್ನು ನೆನಪು ಮಾಡಿಕೊಳ್ಳುವ ಮೂಲಕ ನಾನು ಹಿಂದೂ ಧರ್ಮಕ್ಕೆ ಸೇರಿದವರೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಯೋಗಿ ಟೀಕಿಸಿದ್ದಾರೆ.

ಹಿಂದೂಗಳ ಪವಿತ್ರ ಗ್ರಂಥ ರಾಮಾಯಣ ಕೃತಿ ರಚನೆಯಾದದ್ದು ವಾಲ್ಮೀಕಿ ಋಷಿಯಿಂದ ಎಂಬುದನ್ನು ಗೂಗಲ್ ಮರೆಮಾಚಿತ್ತು. ಆದರೆ ಸತ್ಯ ಬಯಲಿಗೆ ಬಂದ ನಂತರ ತನ್ನ ತಪ್ಪನ್ನು ತಿದ್ದುಕೊಂಡು ವಾಲ್ಮೀಕಿ ವಿರಚಿತ ರಾಮಾಯಣ ಎಂಬುದನ್ನು ಸ್ಪಷ್ಟಪಡಿಸಿತ್ತು. ಅದೇ ರೀತಿ ದೇಶ ರಾಜಕಾರಣದಲ್ಲಿರುವ ಮಹನೀಯರೊಬ್ಬರು ತಾನು ಹಿಂದೂ ಧರ್ಮಕ್ಕೆ ಸೇರಿದವರು ಎಂಬುದನ್ನು ಇದುವರೆಗೂ ಮರೆಮಾಚಿದ್ದರು. ಆದರೆ ಇದರಿಂದ ರಾಜಕೀಯ ಏಳಿಗೆ ಸಾಧ್ಯವಿಲ್ಲ ಎಂಬುದು ಮನದಟ್ಟಾದ ನಂತರ ತಮ್ಮ ಗೋತ್ರ ಮತ್ತು ಜನಿವಾರವನ್ನು ಬಯಲು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಹಿಂದೂ ಧರ್ಮದ ಸಹವಾಸವೇ ಬೇಡ ಎಂದಿದ್ದ ವ್ಯಕ್ತಿ ಕೂಡ ಧರ್ಮ ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂಬ ಪಾಠ ಕಲಿಸಿದೆ. ಇದೇ ನಮ್ಮ ಹಿಂದೂ ಧರ್ಮದ ಶಕ್ತಿ ಎಂದು ಯೋಗಿ ಬಣ್ಣಿಸಿದರು.

ಕುಂಭ ಮೇಳ ನಡೆಸುವುದು ನಿಷ್ಪ್ರಯೋಜಕ ಎಂದು ಜರಿದಿದ್ದ ವ್ಯಕ್ತಿಯೇ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾದ ಶಬರಿಮಲೆ ವಿವಾದಕ್ಕೂ ಕಾರಣವಾಗಿದ್ದರು. ಇದೀಗ ಅಂಥ ವ್ಯಕ್ತಿಗೆ ಧರ್ಮದ ಬಗ್ಗೆ ಜ್ಞಾನೋದಯವಾಗಿದೆ ಎಂದರು.

Facebook Comments