ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 20 ವರ್ಷ ಕಾರಾಗೃಹ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

JAIL-RAPEಚಿಕ್ಕಬಳ್ಳಾಪುರ, ಡಿ.16-ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ 62 ವರ್ಷದ ಗಂಗಾಧರಪ್ಪ ಎಂಬುವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷ ಕಾರಾಗೃಹ ಹಾಗೂ 14 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಗೌರಿಬಿದನೂರು ತಾಲ್ಲೂಕು ಅಲ್ಲೀಪುರ ಗ್ರಾಮದ ಗಂಗಾಧರಪ್ಪ 8 ವರ್ಷದ ಬಾಲಕಿಗೆ ಚಾಕೊಲೆಟ್ ಕೊಟ್ಟು ಬೈಸಿಕಲ್ ತುಳಿಯಲು ಕೊಡುವುದಾಗಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ.

ಇದನ್ನು ಕಂಡ ಸ್ಥಳೀಯರು ಗಂಗಾಧರಪ್ಪನನ್ನು ಥಳಿಸಿ ಮಂಚೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಕ್ಸೋ ಕಾಯಿದೆಯಡಿ ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ಅಧೀಕ್ಷಕರಾದ ಕಾರ್ತಿಕ್‍ರೆಡ್ಡಿ ಸೂಚನೆಯ ಮೇರೆಗೆ ತನಿಖೆ ಕೈಗೊಂಡ ಡಿವೈಎಸ್ಪಿ ಎಂ.ಪ್ರಭುಶಂಕರ್ ಮತ್ತು ಅವರ ತನಿಖಾ ತಂಡವು ಪ್ರಕರಣ ದಾಖಲಾದ 10 ದಿನಗಳೊಳಗಾಗಿ ಈ ಸಂಬಂಧ ಪ್ರಕರಣಕ್ಕೆ ಸಂಭಂಧಿಸಿದ ಸಾಕ್ಷಾಧಾರಗಳನ್ನು ಸಂಗ್ರಹಿಸಿ ದಾಖಲೆಗಳನ್ನು ಪಡೆದು ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಎಸ್.ಹನುಮಂತಪ್ಪ ಕೋರೆಡ್ಡಿ ಅವರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಚಾರಣೆ ಕೈಗೊಂಡ 16 ದಿನಗಳೊಳಗಾಗಿ ವಿಚಾರಣೆ ಮುಗಿಸಿ ಆರೋಪಿ ಗಂಗಾಧರಪ್ಪನಿಗೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ 14 ಸಾವಿರ ರೂಗಳ ದಂಢವನ್ನು ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ಮುನಿರೆಡ್ಡಿ ಮತ್ತು ಅರುಣಾಕ್ಷಿ ಅವರುಗಳು ಪ್ರಕರಣದ ವಾದ ಮಂಡಿಸಿದ್ದರು.

Facebook Comments