ಅಲ್ಲಿ ದುರ್ಗಮ್ಮ ಕಾಪಾಡಿದಳು; ಇಲ್ಲಿ ಮಾರಮ್ಮ ಮರೆತೇ ಬಿಟ್ಟಳು!

ಈ ಸುದ್ದಿಯನ್ನು ಶೇರ್ ಮಾಡಿ

marammaಕಿಚ್ಚುಗುತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ದುರಂತಕ್ಕೆ ಧಾರಾವಾಹಿಯೇ ಪ್ರೇರಣೆಯಾಯಿತೇ?

ಚಾಮರಾಜ ನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಿ ದೇವಾಲಯದಲ್ಲಿ ಪ್ರಸಾದ ಸೇವಿಸಿ 14 ಮಂದಿ ಭಕ್ತರು ಸಾವನ್ನಪ್ಪಿ, 80ಕ್ಕೂ ಹೆಚ್ಚಿನ ಜನ ಅಸ್ವಸ್ಥಗೊಂಡಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಚಾರ. ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದುಷ್ಕøತ್ಯದ ಪ್ರತೀಕ. ದೇವಿ ರಕ್ಷಿಸುತ್ತಾಳೆ ಎಂಬ ನಂಬಿಕೆಯೇ ಪ್ರಾಣಕ್ಕೆ ಕುತ್ತು ತಂದಿದ್ದು ವಿಷಾದವೇ ಸರಿ. ಕಿಚ್ಚುಗತ್ತಿ ಮಾರಮ್ಮ ದೇವಿಯ ತನ್ನ ಭಕ್ತರ ಮೇಲೆ ಏಕೆ ಕರುಣೆ ತೋರಲಿಲ್ಲ. ಇಟ್ಟ ನಂಬಿಕೆಗೆ ಮಾರಮ್ಮನೇಕೆ ಎಳ್ಳು ನೀರು ಬಿಟ್ಟಳು? ಕೆಲವೇ ಮಂದಿ ದುಷ್ಟಕೂಟ ನಡೆಸಿದ ದುಷ್ಕøತ್ಯಕ್ಕೆ ಅಮಾಯಕ ಜೀವಗಳು ಬಲಿಯಾದವು. ಹತ್ತಾರು ವರ್ಷಗಳಿಂದ ದೇವಿಯ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿದ್ದ ಭಕ್ತರಿಗೆ ಮರ್ಮಾಘಾತ ನೀಡಿದೆ ಆ ಒಂದು ದುರ್ಘಟನೆ. ದೇವರನ್ನು ನಾವೇಕೆ ನಂಬಬೇಕು ಎನ್ನುವ ನಾಸ್ತಿಕತೆಯನ್ನು ಹುಟ್ಟುಹಾಕಿ ಬಿಟ್ಟಿದೆ. ಯಾವುದೇ ನಂಬಿಕೆಗಳು ಜೀವಕ್ಕೆ ಕುತ್ತು ತರುವಂತೆ ಇರಬಾರದು. ಚಾಮರಾಜ ನಗರ ಜಿಲ್ಲೆಯ ಸುಳವಾಡಿ ಗ್ರಾಮದ ಮಾರಮ್ಮ ದೇವಿ ಸನ್ನಿಧಿಯಲ್ಲಿ ಗೋಪುರ ಉದ್ಘಾಟನೆ ವೇಳೆ ನಡೆದ ಘಟನೆಗಳು ಹಲವು ಪಾಠಗಳನ್ನು ನಾಗರಿಕ ಸಮಾಜಕ್ಕೆ ಕಲಿಸಿದೆ.

ಗೋಪುರ ನಿರ್ಮಾಣದ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಇದ್ದ ವೈಶಮ್ಯವೇ ಪ್ರಸಾದದಲ್ಲಿ ವಿಷ ಬೆರೆಯಲು ಕಾರಣ ಎಂಬುದು ಮೇಲು ನೋಟಕ್ಕೆ ಕಂಡು ಬಂದಿದೆ. ಇನ್ನೂ ಕೂಡ ಸತ್ಯಾಂಶ ಹೊರ ಬರಬೇಕು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೆÇಲೀಸರು, ಸತ್ಯದ ಹುಡುಕಾಟದಲ್ಲಿ ಚುರುಕಾಗಿದ್ದಾರೆ. ಏನೇ ಆಗಲಿ ಅಮಾಯಕರ ಜೀವಕ್ಕೆ ಬೆಲೆ ಕಟ್ಟುವವರು ಯಾರು. ಸರ್ಕಾರ ನೀಡಿದ 5 ಲಕ್ಷ ಪರಿಹಾರದ ಹಣ. ಕುಟುಂಬಕ್ಕೆ ಶಾಂತಿಯನ್ನು ನೀಡಬಲ್ಲುದೇ. ನಾವು ಇಟ್ಟ ನಂಬಿಕೆಗಳೇ ನಮಗೆ ಮುಳುವಾದಾಗ ಏನು ಹೇಳಬೇಕು.

ಕೆಲ ತಿಂಗಳುಗಳ ಹಿಂದೆ ದೆಹಲಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ದೇವರ ಕಣ್ಣಪ್ಪನಂತೆ ಆಗಬೇಕು ಎನ್ನುವ ಉದ್ದೇಶದಿಂದ ಭಕ್ತನೊಬ್ಬ ತನ್ನ ಕಣ್ಣುಗಳನ್ನೇ ಮೀಟಿಕೊಂಡು ಬಿಟ್ಟಿದ್ದ ಇಂತಹ ಅನೇಕ ಉದಾಹರಣೆಗಳು ನಮ್ಮ ಮಧ್ಯೆಯೇ ನಡೆದಿವೆ. ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹನ್ನೊಂದು ಮಂದಿ ದೇವರು ಹಾಗೂ ಆಧ್ಯಾತ್ಮಿಕತೆಯ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯೇ ದುರ್ಘಟನೆಗೆ ಕಾರಣವಾಯಿತು. ಕೊನೆ ಘಳಿಗೆಯಲ್ಲಿ ದೇವರು ಬಂದು ರಕ್ಷಿಸುತ್ತಾನೆ ಎಂದು ನಂಬಿಕೆ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದರು. ಪ್ರಾಣ ಹೋಗುವಾಗ ಯಾವ ದೇವರು ಬಂದು ಇವರನ್ನು ರಕ್ಷಿಸಲಿಲ್ಲ.

ಇಂತಹ ಘಟನೆಗಳ ಬೆನ್ನು ಹತ್ತಿ ಹೋದಾಗ ನಮಗೆ ತಿಳಿದು ಬರುವ ವಿಚಾರಗಳು ಎಂದರೆ ಕೆಲ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಕೂಡ ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತದೆ ಎನ್ನಬಹುದು. ಒಂದು ಹೊತ್ತಿನ ಊಟವನ್ನು ಬಿಟ್ಟಾರೆಯೇ ಹೊರತು ನೆಚ್ಚಿನ ಧಾರಾವಾಹಿ ನೋಡುವುದನ್ನು ನಿಲ್ಲಿಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಹಲವು ನಿರ್ಮಾಪಕ, ನಿರ್ದೇಶಕರು ಜನರ ನಂಬಿಕೆಗಳು, ಮೂಢ ನಂಬಿಕೆಗಳನ್ನೇ  ಡವಾಳವಾಗಿಸಿಕೊಂಡು ಸರಣಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಯಾವುದೇ ಚಾನಲ್ ತೆಗೆದುಕೊಂಡರೂ ಅದರಲ್ಲಿ ದೇವರು ಹಾಗೂ ದೆವ್ವದ ಧಾರಾವಾಹಿಯೊಂದು ಇದ್ದೇ ಇರುತ್ತದೆ. ಈಗಲೂ ಇಂತಹದ್ದೊಂದು ಧಾರಾವಾಹಿಯನ್ನು ಕೂಡ ಉಲ್ಲೇಖಿಸಬಹುದು.

ಈಗಲೂ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರಲ್ಲಿ ದುರ್ಗಮ್ಮ ದೇವಿಯಲ್ಲಿ ಹರಕೆ ಹೊತ್ತು ಬರುವ ನಾಯಕಿ ಸಪ್ತ ಮಾತೃಕೆಯರ ರೂಪದ ಕನ್ಯೆಯರಿಗೆ ಪ್ರಸಾದ ನೈವೇದ್ಯ ಮಾಡಲು ಮುಂದಾಗುತ್ತಾಳೆ. ಇದನ್ನು ಹಾಳು ಮಾಡುವ ದೃಷ್ಟಿಯಲ್ಲಿ ಅದಕ್ಕೆ ವಿಷ ಬೆರೆಸಿ ಕೆಟ್ಟ ಹೆಸರು ಬರುವಂತೆ ಮಾಡಲು ಸಂಚು ನಡೆಯುತ್ತದೆ. ಆದರೆ ಅದೇ ಸಂದರ್ಭದಲ್ಲಿ ಗಿಳಿಯೊಂದು ಬಂದು ದುರಂತವನ್ನು ತಪ್ಪಿಸುತ್ತದೆ.

ಈ ಸನ್ನಿವೇಶವೇ ಕಿಚ್ಚುಗತ್ತಿ ಮಾರಮ್ಮ ದೇಗುವದ ದುರಂತಕ್ಕೆ ಪ್ರೇರಣಯಾಯಿತೇ? ಇಂತಹದ್ದೊಂದು ಅನುಮಾನ ದಟ್ಟವಾಗಿದೆ. ಮತ್ತೊಂದು ಧಾರಾವಾಹಿಯಲ್ಲಿ ಅಗ್ನಿಕೊಂಡಕ್ಕೆ ಹರಳನ್ನು ಹಾಕಿ ಕೊಲೆ ಮಾಡುವ ಸಂಚನ್ನು ಹೆಣೆದಿರುವುದನ್ನು ಕೂಡ ದೇವಿ ಪರಿಹರಿಸುತ್ತಾಳೆ. ಹೀಗೆ ಅನೇಕ ದೃಶ್ಯಾವಳಿಗಳನ್ನು ಅತ್ಯಂತ ವಿಜೃಂಭಣೆಯಿಂದ ತೋರಿಸಲಾಗುತ್ತದೆ. ಮೊದಲೇ ಧರ್ಮ ದೇವರನ್ನು ನಂಬುವ ಗ್ರಾಮೀಣ ಜನತೆ ದೇವಿ ರಕ್ಷಿಸುತ್ತಾಳೆ ಎಂಬ ನಂಬಿಕೆಗೆ ಬಂದು ಬಿಡುತ್ತಾರೆ. ಯಾವುದೇ ಧಾರಾವಾಹಿಯ ನಿರ್ಮಾಪಕ ಹಾಗೂ ನಿರ್ದೇಶಕನಿಗೆ ಸಾಮಾಜಿಕ ಜವಾಬ್ದಾರಿಯೂ ಬೇಕಿರುತ್ತದೆ. ನಂಬಿಕೆ ಹಾಗೂ ಮೂಢ ನಂಬಿಕೆಗಳನ್ನು ತೋರಿಸುವ ಚೌಕಟ್ಟನ್ನು ಮೀರಬಾರದು. ಅಹಿತವಾದ ವಿಚಾರಗಳನ್ನೇ ಬಲವಾಗಿ ತುಂಬಿದಾಗ ಏನೆಲ್ಲಾ ದುರ್ಘಟನೆಗಳು ನಡೆಯುತ್ತವೆ ಎನ್ನುವುದಕ್ಕೆ ಇಂತಹ ಘಟನೆಗಳು ಕಾರಣವಾಗುತ್ತವೆ.

ಈ ಹಿಂದೆ ದೃಶ್ಯ ಸಿನಿಮಾ ನೋಡಿ ದುರುಳನೊಬ್ಬ ಕೊಲೆ ನಡೆಸಿದ ಘಟನೆಯನ್ನೂ ನೋಡಿದ್ದೇವೆ. ಸಿನಿಮಾ ನೋಡಿ ಅದೇ ಶೈಲಿಯಲ್ಲಿ ದರೋಡೆ ನಡೆಸಿ ಸಿಕ್ಕಿಕೊಂಡವನ ಉದಾಹರಣೆಯೂ ನಮ್ಮ ಮುಂದಿದೆ. ಕಲ್ಪನೆಯ ಕಥೆಗಳೇ ಬೇರೆ, ವಾಸ್ತವವೇ ಬೇರೆ. ಇದನ್ನು ಇನ್ನಾದರು ಜನರು ಅರಿಯಬೇಕು.
ಈಗಿನ ದಿನಮಾನದಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವ ಅದೆಷ್ಟರ ಮಟ್ಟಿಗೆ ಇದೆಯೆಂದರೆ ಒಳಿತುಗಳಿಗಿಂತ ಕೆಡುಕುಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಒಂದು ರೀತಿ ಪರೋಕ್ಷವಾಗಿ ದೃಶ್ಯ ಮಾಧ್ಯಮಗಳೇ ಅಪರಾಧಗಳಿಗೆ ಪ್ರೇರಣೆ ನೀಡುತ್ತಿವೆಯೇ ಅನಿಸಿಬಿಡುತ್ತದೆ.
ಪ್ರಸಾದ ಸೇವಿಸಿದ ಭಕ್ತರು ವಾಂತಿಯಾದ ಕೂಡಲೇ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರೆ ಹೆಚ್ಚಿನ ಪ್ರಾಣ ಹಾನಿಯನ್ನು ತಡೆಯಬಹುದಿತ್ತು. ಅಲ್ಲಿ ದುರ್ಗಮ್ಮ ಕಾಪಾಡಿದಳು; ಇಲ್ಲಿ ಮಾರಮ್ಮ ತನ್ನ ಭಕ್ತರನ್ನು ಮರೆತೇ ಬಿಟ್ಟಳು. ದೇವತೆಯ ಪ್ರಸಾದದ ಮೇಲೆ ಇಟ್ಟಿದ್ದ ನಂಬಿಕೆ, ದೇವಿ ರಕ್ಷಿಸುತ್ತಾಳೆ ಎನ್ನುವ ವಿಶ್ವಾಸವೇ ಪ್ರಾಣಕ್ಕೆ ಕುತ್ತು ತಂದಿತ್ತು. ಇದು ನಿಜಕ್ಕೂ ದುರಂತ.

Facebook Comments