ಕಿಚ್ಚುಗುತ್ತಿ ಮಾರಮ್ಮ ದುರಂತ ಒಂದೆರಡು ದಿನದಲ್ಲಿ ಸತ್ಯಾಂಶ ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

dcmಬೆಳಗಾವಿ(ಸುವರ್ಣಸೌಧ), ಡಿ.17- ಚಾಮರಾಜ ನಗರ ಜಿಲ್ಲೆ ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನೀಡಲಾದ ಪ್ರಸಾದದಲ್ಲಿ ಮನೋಕ್ರೋಟೊಫಸ್ ಎಂಬ ಕೀಟನಾಶಕ ಅಂಶವಿರುವುದು ಪತ್ತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ವಿಧಾನಸಭೆಗೆ ತಿಳಿಸಿದರು.
ವಿಧಾನಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಮಾರಮ್ಮ ದೇವಾಲಯದಲ್ಲಿ ಭಕ್ತರಿಗೆ ವಿತರಿಸಲಾದ ಪ್ರಸಾದದಲ್ಲಿ ಮನಷ್ಯರ ಜೀವಕ್ಕೆ ಹಾನಿಕಾರಕವಾದ ರಾಸಾಯನಿಕ ವಿರುವುದು ಪತ್ತೆಯಾಗಿದೆ. ಯಾರು ಪ್ರಸಾದದಲ್ಲಿ ಕೀಟನಾಶಕ ಬೆರೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇನ್ನೂ ಕೆಲವರು ಊರು ಬಿಟ್ಟಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಿದ್ದು, ಒಂದೆರಡು ದಿನಗಳಲ್ಲಿ ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು.

ಡಿ.14ರಂದು ಮಾರಮ್ಮ ದೇವಾಲಯಕ್ಕೆ ಗೋಪುರ ಕಟ್ಟಲು ಗುದ್ದಲಿ ಪೂಜೆ ನಡೆಸಲಾಗಿತ್ತು. ಅದರಲ್ಲಿ 150ರಿಂದ 200 ಮಂದಿ ಭಾಗವಹಿಸಿದ್ದರು. ದೇವಾಲಯದಲ್ಲಿ ತರಕಾರಿ ಬಾತ್‍ನ್ನು ಪ್ರಸಾದ ರೀತಿಯಲ್ಲಿ ನೀಡಿದ್ದಾರೆ. ಪ್ರಸಾದ ಸ್ವೀಕರಿಸಿದ ಅರ್ಧಗಂಟೆಯಲ್ಲೇ ಭಕ್ತರು ಅಸ್ವಸ್ಥರಾಗಿದ್ದಾರೆ. ತಕ್ಷಣ ಪೆÇಲೀಸರು ಹಾಗೂ ಸಾರ್ವಜನಿಕರು ಸುತ್ತಮುಲಿನ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಆದರೂ 11 ಮಂದಿ ಮೃತಪಟ್ಟಿದ್ದಾರೆ. ಉಳಿದ 125 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತಪಟ್ಟವರ ಹೆಸರುಗಳನ್ನು ಸದನದ ಗಮನಕ್ಕೆ ತಂದರು.

ಇದುವರೆಗೂ ಒಟ್ಟು 14 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಸಾದದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕೀಟನಾಶಕ ಬೆರೆಸಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬಾಯ್ಲರ್ ಸ್ಫೋಟವಾಗಿದೆ ಆ ಬಾಯ್ಲರ್ ಪ್ರಾಯೋಗಿಕವಾಗಿ ಬಳಸಲಾಗುತ್ತಿತ್ತು. ಆ ಹಂತದಲ್ಲೇ ಸ್ಫೋಟಗೊಂಡು ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸದನಕ್ಕೆ ತಿಳಿಸಿದರು. ಸರ್ಕಾರದಿಂದಲೂ ಪರಿಹಾರ ನೀಡಿ: ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನಿರಾಣಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟಗೊಂಡು ನಾಲ್ಕು ಮಂದಿ ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಕಂಪೆನಿ ಘೋಷಣೆ ಮಾಡಿದೆ. ಅದರ ಜತೆಗೆ ಸರ್ಕಾರವೂ 5 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಂಸ್ಕರಣಾ ಘಟಕದಲ್ಲಿದ್ದ 15 ಜನರ ಪೈಕಿ ಮೂರು ಮಂದಿಗೆ ಯಾವುದೇ ರೀತಿ ಹಾನಿಯಾಗಿಲ್ಲ. ಇದೇ ರೀತಿ ಸ್ಫೋಟ ಕೇರಳ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆಯೂ ಸಂಭವಿಸಿದೆ ಎಂಬುದನ್ನು ಸದನದ ಗಮನಕ್ಕೆ ತಂದರು.

Facebook Comments