ಕಿಚ್ಚುಗುತ್ತಿ ಮಾರಮ್ಮ ದುರಂತ ಕೂಲಂಕಷ ತನಿಖೆಗೆ ನಾಗೇಂದ್ರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

hanoruಬೆಳಗಾವಿ(ಸುವರ್ಣಸೌಧ), ಡಿ.17- ಚಾಮರಾಜ ನಗರ ಜಿಲ್ಲೆ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ತಿಂದು ಭಕ್ತರು ಮೃತಪಟ್ಟಿರುವ ಘಟನೆಯ ಬಗ್ಗೆ ಕೂಲಂಕಷ ತನಿಖೆಯಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಹನೂರು ಶಾಸಕ ನಾಗೇಂದ್ರ ವಿಧಾನಸಭೆಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದರು. ಸಭಾಧ್ಯಕ್ಷರು ಮಂಡಿಸಿದ ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಶಾಸಕರು, ಮಾರಮ್ಮ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು. ಆಡಳಿತ ಮಂಡಳಿ ಹಾಗೂ ಪೂಜಾರಿಗಳ ನಡುವೆ ಒಡಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ ಯಾರು ಏನು ಮಾಡಿದ್ದಾರೆಯೋ ಎಂಬ ಅನುಮಾನಗಳು ವ್ಯಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಆ ದೇವಾಲಯದಲ್ಲಿ ತೀರ್ಥ, ಪ್ರಸಾದ ಸೇವಿಸಲು ಭಕ್ತರು ಮೀನಾಮೇಷ ಎಣಿಸುತ್ತಿದ್ದಾರೆ.

ಮೃತಪಟ್ಟವರು ಬಿದರಹಳ್ಳಿ, ಎಂ.ಜಿ.ದೊಡ್ಡಿಗೆ ಸೇರಿದವರಾಗಿದ್ದಾರೆ. ಓಂಶಕ್ತಿ ದೇವಾಲಯಕ್ಕೆ ಹೋಗುವ ಮುನ್ನ ಮಾರಮ್ಮ ದೇವಾಲಯಕ್ಕೆ ಬಂದು ಪ್ರಸಾದ ಸೇವಿಸಿ ಮೃತಪಟ್ಟಿದ್ದಾರೆ. ಪ್ರಸಾದಲ್ಲಿ ವಿಷ ಸೇರಿಸುವ ಪ್ರಸಂಗ ಹಿಂದೆಂದೂ ಕೇಳಿರಲಿಲ್ಲ. ಈಗಾಗಲೇ ಮೃತರ ಕುಟುಂಬಸ್ಥರಿಗೆ ಐದು ಲಕ್ಷ ರೂ. ಸರ್ಕಾರ ಪರಿಹಾರ ಧನ ಘೋಷಿಸಿದೆ. ಇನ್ನೂ ಹೆಚ್ಚಿನ ಧನ ಸಹಾಯವನ್ನು ನೀಡಬೇಕು. ತಂದೆ-ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳಿದ್ದಾರೆ. ಬದುಕಿರುವವರನ್ನು ಉಳಿಸಬೇಕಾಗಿದೆ. ಅಲ್ಲದೆ, 108 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ 15 ಮಕ್ಕಳೂ ಸೇರಿದ್ದಾರೆ. 29 ಮಂದಿ ವೆಂಟಿಲೇಟರ್‍ನಲ್ಲೇ ಇದ್ದಾರೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಡಿ.14ರಂದು ಬೆಳಗ್ಗೆ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ಟ್ರಸ್ಟ್‍ನಿಂದ ಗೋಪುರ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ನೀಡಲಾದ ಪ್ರಸಾದ ಸೇವಿಸಿ ಈ ದುರ್ಘಟನೆ ಸಂಭವಿಸಿದೆ. ಮುಖ್ಯಮಂತ್ರಿಯವರು ಸುದ್ದಿ ತಿಳಿದ ತಕ್ಷಣ ಚೆನ್ನೈನಿಂದ ಮೈಸೂರಿಗೆ ಆಗಮಿಸಿ ಅಸ್ವಸ್ಥರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಆ ಖರ್ಚುನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೂಡ ಮುತುವರ್ಜಿ ವಹಿಸಿ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೃತಪಟ್ಟ 14ಮಂದಿಯಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಇಂತಹ ಘಟನೆ ಮುಂದೆ ನಡೆಯದಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

Facebook Comments