800 ಮಂದಿ ಸರ್ವೆಯರ್‍ಗಳ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

RV Deshpandeಬೆಳಗಾವಿ(ಸುವರ್ಣಸೌಧ), ಡಿ.17- ರಾಜ್ಯದಲ್ಲಿ ಹೊಸದಾಗಿ 800 ಮಂದಿ ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಹಡಗೂರು ಎಚ್.ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸದಾಗಿ ನೇಮಕವಾದ ಸರ್ವೆಯರ್‍ಗಳ ಪೈಕಿ 33 ಮಂದಿಯನ್ನು ಮೈಸೂರು ಜಿಲ್ಲೆಗೂ ಹಾಗೂ ಮೂರು ಮಂದಿಯನ್ನು ಹುಣಸೂರು ತಾಲ್ಲೂಕಿಗೂ ನೇಮಿಸಲಾಗುವುದು. ಬಾಕಿ ಇರುವ ಜಮೀನಿನ ಅಳತೆಯನ್ನು ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ 2015ರಲ್ಲಿ ಹುಣಸೂರು ತಾಲ್ಲೂಕಿನಲ್ಲಿ ಪೋಡಿ ಮುಕ್ತ ಗ್ರಾಮ ಯೋಜನೆಯನ್ನು ಪ್ರಾರಂಭಿಸಿದ್ದು, 211 ಗ್ರಾಮಗಳ ಪೈಕಿ 122 ಗ್ರಾಮಗಳಲ್ಲಿ ಜಮೀನಿನ ಅಳತೆ ಪೂರೈಸಲಾಗಿದೆ. 71 ಗ್ರಾಮಗಳಲ್ಲಿ ದುರಸ್ತಿ ಮಾಡಲಾಗಿದೆ. 51 ಗ್ರಾಮಗಳಲ್ಲಿ ದುರಸ್ತಿ ಮಾಡಬೇಕಾಗಿದೆ. 57 ಗ್ರಾಮಗಳನ್ನು ದುರಸ್ತಿಗೊಳಿಸಿ ಆರ್‍ಟಿಸಿ ಹಿಂಡೀಕರಣ ಮಾಡಲಾಗಿದೆ. 14 ಗ್ರಾಮಗಳ ಆರ್‍ಟಿಸಿ ಹಿಂಡೀಕರಣ ಮಾಡಲು ಬಾಕಿ ಇದ್ದು, ಜಮೀನಿನ ಅಳತೆ 89 ಗ್ರಾಮಗಳಲ್ಲಿ ಮಾಡಬೇಕಾಗಿದ್ದು, ಶೀಘ್ರವೇ ಮಾಡುವ ಭರವಸೆ ನೀಡಿದರು.ಇದಕ್ಕೂ ಮುನ್ನ ಮಾತನಾಡಿದ ಶಾಸಕರು, ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೊಟ್ಟಂತ ಜಮೀನಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ದರಖಾಸ್ತು ಭೂಮಿಗೆ ಪೋಡಿ ಮುಕ್ತ ಆಂದೋಲನ ಕೈಗೊಳ್ಳಲು ವಿಶೇಷ ತಂಡ ರಚಿಸಿ ಕಾಲಮಿತಿಯಲ್ಲಿ ಪೋಡಿ ಮಾಡಿ ಕೊಳ್ಳಬೇಕು ಎಂದು ಒತ್ತಾಯಿಸಿದರು.

200 ಕೋಟಿ ವಿಶೇಷ ಅನುದಾನ:ಪ್ರವಾಹ ಹಾಗೂ ಭೂ ಕುಸಿತ ಸೇರಿದಂತೆ ಅತಿವೃಷ್ಟಿಗೆ ಒಳಗಾಗಿದ್ದ ಕೊಡಗು ಸೇರಿದಂತೆ 8 ಜಿಲ್ಲೆಗಳಿಗೆ 200 ಕೋಟಿ ವಿಶೇಷ ಅನುದಾನ ಒದಗಿಸಲಾಗಿದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.ಇದರಲ್ಲಿ ಕೊಡಗು ಜಿಲ್ಲೆಗೆ 85 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ 722.06 ಕೋಟಿ ರೂ. ಪರಿಹಾರ ಕೋರಿದ್ದು, ಈ ಪೈಕಿ 546.21 ಕೋಟಿ ಅನುದಾನ ಮಂಜೂರು ಮಾಡಿದೆ. ಈ ಪೈಕಿ ಕೊಡಗಿಗೂ ಇನ್ನೆರಡು ಮೂರು ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಡಿಸೆಂಬರ್ 30ರೊಳಗೆ ಕೊಡಗು ಜಿಲ್ಲೆ ಬೆಳೆ ಪರಿಹಾರವಾಗಿ 103.82 ಕೋಟಿ ರೂ.ಅನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗಾಗಿ 27 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮೂಲಸೌಕರ್ಯ ಕಾಮಗಾರಿಗೆ 85 ಕೋಟಿ ರೂ. ಬಿಡುಗಡೆ ಮಾಡಿದ್ದು, ಮೂಲಸೌಕರ್ಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು.

Facebook Comments