ಸ್ಟೋನ್ ಕ್ರಷರ್, ಕಲ್ಲು ಉದ್ದಿಮೆದಾರರ ಸಮಸ್ಯೆ ಬಗೆಹರಿಸಿ: ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

bsyಬೆಳಗಾವಿ, ಡಿ.17- ಕ್ರಷರ್ ಸಿ ಫಾರಂಅನ್ನು 20 ವರ್ಷಗಳ ಅವಧಿಗೆ ವಿಸ್ತರಣೆ ಮಾಡುವುದು, ಕಲ್ಲು ಗಣಿ ಗುತ್ತಿಗೆಯನ್ನು 30 ವರ್ಷಗಳ ಅವಧಿಗೆ ವಿಸ್ತರಣೆ, ಕಟ್ಟಡದ ಕಲ್ಲಿಗೆ ಎಂಡಿಪಿಯನ್ನು ತೆಗೆದು ಹಾಕುವುದು ಸೇರಿದಂತೆ ಸ್ಟೋನ್ ಕ್ರಷರ್ ಮತ್ತು ಕಟ್ಟಡದ ಕಲ್ಲು ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಳಗಾವಿಯ ಕೊಂಡಸಕೊಪ್ಪದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷನರ್ ಓನರ್ ಅಸೋಷಿಯೇಶನ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರಷರ್ ಸಿ ಫಾರಂ 20 ವರ್ಷಗಳ ಅವಧಿಗೆ ವಿಸ್ತರಣೆ ಮಾಡಿಕೊಡಬೇಕು. ಕ್ರಷರ್ ಪರವಾನಗಿಯನ್ನು ಭೂ ವಿಜ್ಞಾನ ಇಲಾಳೆಗೆ ವಹಿಸಬೇಕು. ಕಟ್ಟಡದ ಕಲ್ಲನ್ನು ಮೈನರ್ ಮಿನರಲ್ಸ್‍ನಿಂದ ತೆಗೆದು ಎಸೆನ್ಷಿಯಲ್ ಕಮಾಡಿಟಿ ಕೆಳಗೆ ಹಾಕುವುದು ಮತ್ತು ಕಲ್ಲು ಗಣಿ ಗುತ್ತಿಗೆಯನ್ನು 30ವರ್ಷಗಳ ಅವಧಿಗೆ ವಿಸ್ತರಣೆ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸ್ಟೋನ್ ಕ್ರಷರ್ ಮತ್ತು ಕಟ್ಟಡದ ಕಲ್ಲು ಉದ್ಯಮಿದಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು, ಕಟ್ಟಡದ ಕಲ್ಲಿಗೆ ಎಂಡಿಪಿಯನ್ನು ತೆಗೆದು ಹಾಕಬೇಕು. ರಾಜಧನವನ್ನು ಕೊನೆಯ ಬಳಕೆದಾರರಿಂದ ಪಡೆಯಬೇಕು. ಡ್ರೋಣ್ ಸರ್ವೆ, ಒನ್‍ಟೈಮ್ ರಾಯಲ್ಟಿ, ಫೈವ್ ಟೈಂ ಫೆನಾಲ್ಟಿಯನ್ನು ತತ್‍ಕ್ಷಣವೇ ತೆಗೆದು ಹಾಕಬೇಕು, ಕ್ರಷರ್ ಮತ್ತು ಕಟ್ಟಡ ಕಲ್ಲು ಪರವಾನಗಿಯನ್ನು ಜಿಲ್ಲಾ ಕಾರ್ಯಾಚರಣೆ ಪಡೆ ಸಮಿತಿಯಿಂದ ತತ್‍ಕ್ಷಣವೇ ತೆಗೆದು ಹಾಕಬೇಕು, ಪಟ್ಟಾಲ್ಯಾಂಡ್‍ಗಳಿಗೆ ಡೀಮ್ಡ್ ಎನ್‍ಎ ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲೇ ಸರ್ಫೇಸ್‍ರೆಂಟ್ ಕಟ್ಟಿಸಿಕೊಂಡು ಪರವಾನಗಿ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿದರು.

ಡೀಮ್ಡ್ ಫಾರೆಸ್ಟ್‍ನಲ್ಲಿ ಈಗಾಗಲೇ ಕಟ್ಟಡದ ಕಲ್ಲು ಕ್ವಾರಿ ಮತ್ತು ಕ್ರಷರ್‍ಗಳ ಪರವಾನಗಿಯನ್ನು ಸಬ್ಜೆಟ್ ಟೂ ಕಂಡೀಷನ್‍ನಡಿ ಮಾಡಿಕೊಡಬೇಕು, ವೈಲ್ಡ್ ಲೈಫ್ ಸೆಂಚುರಿ, ನ್ಯಾಷುನಲ್ ಪಾರ್ಕ್, ಕರಡಿ ಧಾಮ ಮತ್ತು ರಿಸರ್ವ್ ಫಾರೆಸ್ಟ್ ಇವುಗಳ ಬಫರ್ ಝೋನ್ ಮಿತಿಯು ಇತ್ಯಾರ್ಥವಾಗುವವರೆಗೂ ಈಗ ಚಾಲ್ತಿಯಲ್ಲಿರುವ ಸ್ಟೋನ್ ಕ್ರಷರ್ ಕಟ್ಟಡ ಕಲ್ಲುಗಳನ್ನು ಸಬ್ಜೆಟ್ ಟೂ ಕಂಡಿಷನ್ ಅಡಿಯಲ್ಲೇ ಪರವಾನಗಿ ನೀಡುವುದು, ಪಟ್ಟಾ ಲ್ಯಾಂಡ್‍ಗೆ ರಾಜಧನವನ್ನು ನೀಡುವ ಅವಶ್ಯಕತೆ ಇಲ್ಲದ ಕಾರಣ, ಈಗಾಗಲೇ ಕಟ್ಟಡ ಕಲ್ಲು ಗಣಿ ಗುತ್ತಿಗೆ ಮತ್ತು ಎಂ ಸ್ಯಾಂಡ್ ಅರ್ಜಿಗಳನ್ನು ಪುರಸ್ಕರಿಸಬೇಕೆಂದು ಮನವಿ ಮಾಡಿದರು.
ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಕಲಾಪದಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು. ನೀವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಬದ್ಧನಾಗಿದ್ದೇನೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದರು.

Facebook Comments