ದೇಗುಲ ದುರಂತದಲ್ಲಿ ಮಡಿದವರಿಗೆ ಸದನದಲ್ಲಿ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

santapaಬೆಳಗಾವಿ(ಸುವರ್ಣಸೌಧ), ಡಿ.17- ಮಾಜಿ ಶಾಸಕ ಕರಿಯಣ್ಣ, ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸುಳ್ವಾಡಿಯಲ್ಲಿ ಪ್ರಸಾದ ತಿಂದು ಮೃತಪಟ್ಟವರು ಹಾಗೂ ನಿನ್ನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರಿಗೆ ವಿಧಾನಸಭೆಯಲ್ಲಿಂದು ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂದು ಬೆಳಗ್ಗೆ ವಿಧಾನಸಭೆ ಸಮಾವೇಶ ಗೊಂಡಾಗ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ವಿಧಾನಸಭೆ ಮಾಜಿ ಸದಸ್ಯ ಕರಿಯಣ್ಣ ನಿಧನರಾಗಿರುವುದನ್ನು ವಿಷಾದದಿಂದ ಪ್ರಕಟಿಸಿದರು. ಹಾಗೆಯೇ ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ಅಸಹಜವಾಗಿ ಮೃತಪಟ್ಟಿರುವುದು ಹಾಗೂ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಸಂಸ್ಕರಣಾ ಘಟಕದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ನೋವಿನಿಂದ ಸದನಕ್ಕೆ ತಿಳಿಸಿದರು. ಸಾವು ಮನುಕುಲಕ್ಕೆ ನೋವು ತರುವಂತಹ ಸಂಗತಿ, ಸಾವಿಗೆ ಪರಿಹಾರವಿಲ್ಲ. ಮೃತಪಟ್ಟವರ ಕುಟುಂಬಸ್ಥರು ಯಾವ ರೀತಿ ನೋವಿಗೆ ಒಳಗಾಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳ ಸಭೆಯಾಗಿರುವ ಇಡೀ ಸದನ ಅವರ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂಬುದನ್ನು ತಿಳಿಸಬೇಕು. ಅವರ ನೋವಿಗೆ ಸ್ಪಂದಿಸಬೇಕು ಎಂದರು.ವಿಧಾನಸಭೆ ಮಾಜಿ ಸದಸ್ಯರಾದ ಕರಿಯಣ್ಣ ಅವರು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಸಹಕಾರಿ ಧುರೀಣರು.ಶಿವಮೊಗ್ಗ ನಗರಾಭಿ ವೃದ್ಧಿ ಅಧ್ಯಕ್ಷರಾಗಿದ್ದರು, ಎರಡು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದರು, ಅವರ ನಿಧನ ನೋವು ತಂದಿದೆ ಎಂದು ಹೇಳಿ ಮೃತರ ಆತ್ಮಕ್ಕೆ ಚಿರಶಾಂತಿ ಹಾಗೂ ಮೃತರ ಕುಟುಂಬಕ್ಕೆ ನೋವು ಭರಿಸುವು ಶಕ್ತಿ ತರಲಿ ಎಂದು ಪ್ರಾರ್ಥಿಸಿದರು.

ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತ ನಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಶಾಸಕ ಕರಿಯಣ್ಣ ಅವರ ನಿಧನದಿಂದ ನೋವುಂಟಾಗಿದೆ. ಆತ್ಮೀಯ ಸ್ನೇಹಿತರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಸಚಿವ ಸ್ಥಾನದಿಂದ ವಂಚಿತರಾಗಿದ್ದರೂ ನಿರಾಶೆ ಹೊಂದುವ ಮನಸ್ಥಿತಿ ಹೊಂದಿರಲಿಲ್ಲ. ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ ಎಂದು ಅವರ ಗುಣಗಾನ ಮಾಡಿದರು.

ಅದೇ ರೀತಿ ಸೂಳ್ವಾಡಿ ಗ್ರಾಮದಲ್ಲಿ ಪ್ರಸಾದ ತಿಂದು ಮೃತಪಟ್ಟವರು ಹಾಗೂ ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ ಸ್ಫೋಟ ಗೊಂಡು ಮೃತಪಟ್ಟವರಿಗೂ ಸಂತಾಪ ಸೂಚಿಸಿದರು. ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಾಜಿ ಶಾಸಕ ಕರಿಯಣ್ಣ ಅವರು ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು, ಅವರ ನಿಧನದಿಂದ ತುಂಬ ನೋವುಂಟಾಗಿದೆ. ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ 14 ಮಂದಿ ಮೃತಪಟ್ಟಿದ್ದಾರೆ. ಪ್ರಸಾದ ತಯಾರಿಸಿದ ವ್ಯಕ್ತಿಯ ಮಗಳೂ ಮೃತಪಟ್ಟಿದ್ದಾಳೆ. ವ್ಯವಸ್ಥಿತವಾದ ಪಿತೂರಿ ಇರುವಂತಿದೆ. ಇನ್ನು ಮುಂದೆ ಇಂತಹ ಘಟನೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ 5 ಲಕ್ಷ ಪರಿಹಾರ ಘೋಷಣೆ ಮಾಡಿ ತನಿಖೆ ನಡೆಸಲು ಕ್ರಮ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸ್ಫೋಟಸಂಭವಿಸಿ ಮೃತಪಟ್ಟವರಿಗೂ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದರು. ಹನೂರು ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿ, ಮಾಜಿ ಶಾಸಕ ಕರಿಯಣ್ಣ, ಸೂಳ್ವಾಡಿ ಗ್ರಾಮದಲ್ಲಿ ಪ್ರಸಾದ ತಿಂದು ಮೃತಪಟ್ಟವರು ಹಾಗೂ ಬಾಯ್ಲರ್ ಸ್ಫೋಟದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನಂತರ ಮೃತರ ಗೌರವಾರ್ಥ ಸದನದ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.

Facebook Comments