ವಿಧಾನಸಭೆಯಲ್ಲಿ ದೇವಾಲಯಗಳ ಅನುದಾನ ತಾರತಮ್ಯ ಕುರಿತು ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

bviಬೆಳಗಾವಿ(ಸುವರ್ಣಸೌಧ), ಡಿ.17-ಮುಜರಾಯಿ ಇಲಾಖೆ ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ಪ್ರಶ್ನಿಸುವ ಸಂದರ್ಭದಲ್ಲಿ ಅನ್ಯಧರ್ಮದ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಶಾಸಕರ ಚರ್ಚೆಗೆ ಅವಕಾಶ ನೀಡದೆ ಸ್ಪೀಕರ್ ಕಡಿವಾಣ ಹಾಕಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‍ನ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಪ್ರಶ್ನೆ ಕೇಳಿ, ಕಳೆದ ಮೂರು ವರ್ಷದಲ್ಲಿ ಆರಾಧನಾ ಯೋಜನೆಯಡಿ ಮಂಜೂರಾದ ಹಣವೆಷ್ಟು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿ ಮುಜರಾಯಿ ಸಚಿವ ರಾಜಶೇಖರ ಬಿ.ಪಾಟೀಲ ಅವರು, ಮೂರು ವರ್ಷಗಳಲ್ಲಿ ಆರಾಧನ ಯೋಜನೆಗಾಗಿ 3.97 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ. ಸರ್ಕಾರದಿಂದ ಸುಮಾರು ಒಂದು ಲಕ್ಷ ಹೊರತು ಪಡಿಸಿ ಉಳಿದ ಎಲ್ಲಾ ಹಣವನ್ನು ಜಿಲ್ಲಾಧಿಕಾರಿಗಳಿಗೆ ಸಮಾನ ಕಂತುಗಳಲ್ಲಿ ಹಂಚಿಕೆ ಮಾಡಲಾಗಿದೆ. ಈವರೆಗೂ ಜಿಲ್ಲಾಧಿಕಾರಿಗಳು 3.82 ಕೋಟಿ ಖರ್ಚು ಮಾಡಿದ್ದಾರೆ ಎಂದು ಹೇಳಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಬಿಡುಗಡೆ ಮಾಡಲಾಗಿರುವ ಅನುದಾನದ ಮಾಹಿತಿಯನ್ನು ಸಚಿವರು ಒದಗಿಸಿದರು. ಅಲ್ಲದೆ ರಾಜ್ಯದಲ್ಲಿರುವ ದೇವಸ್ಥಾನಗಳನ್ನು ಎ ಮತ್ತು ಬಿ ಎಂದು ವರ್ಗೀಕರಿಸಲಾಗಿದ್ದು, ಆಯಾ ಶ್ರೇಣಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿ.ಟಿ.ರವಿ ಅವರು, ಹಿಂದೂ ದೇವಾಲಯಗಳಿಗೆ ನೀಡುತ್ತಿರುವ ಅನುದಾನ ಕಡಿಮೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿ ಮಾಡಬೇಕು. ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಇಲ್ಲದ ಕಡಿವಾಣ ಹಿಂದೂ ದೇವಸ್ಥಾನಗಳಿಗೆ ಏಕೆ ಎಂದು ಪ್ರಶ್ನಿಸಲಾರಂಭಿಸಿದರು.
ಇದರಿಂದ ಏಕಾಏಕಿ ಕೆರಳಿದ ಸ್ಪೀಕರ್, ಈ ಸದನದಲ್ಲಿ ಧಾರ್ಮಿಕ ಆಧಾರಿತವಾಗಿ ರಾಜಕಾರಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಲ್ಲದೆ, ನಿಮಗೆ ಧಾರ್ಮಿಕ ವಿಚಾರವನ್ನು ಚರ್ಚೆ ಮಾಡಬೇಕಾದರೆ ಪ್ರತ್ಯೇಕವಾದ ಅವಕಾಶ ಕೇಳಿ. ಇದು ಪ್ರಶ್ನೋತ್ತರ ಇಲ್ಲಿ ಆರಾಧನ ವಿಚಾರಕ್ಕೆ ಚರ್ಚೆಯಾಗಲಿ ವಿಷಯಾಂತರವಾಗವುದನ್ನು ಚರ್ಚಿಸುವುದಿಲ್ಲ. ಧಾರ್ಮಿಕ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ಯಾವ ಮಾತುಗಳೂ ಕಡತಕ್ಕೆ ಹೋಗುವುದಿಲ್ಲ ಎಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸಿ.ಟಿ.ರವಿ ಅವರ ಬೆಂಬಲಕ್ಕೆ ನಿಂತರೆ ಆಡಳಿತ ಪಕ್ಷದ ಶಾಸಕರು ಸ್ಪೀಕರ್ ಅವರ ಪರವಾಗಿ ನಿಂತರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಬಿ.ಎಸ್.ಯಡಿಯೂರಪ್ಪ, ದೇವಸ್ಥಾನಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ಇಲ್ಲ. ದೇವಸ್ಥಾನಕ್ಕೆ ತಕ್ಕಂತೆ ಅನುದಾನ ನೀಡಿ ಎಂಬುದಷ್ಟೆ ನಮ್ಮ ಶಾಸಕರ ಬೇಡಿಕೆ ಎಂದು ಸಮಜಾಯಿಷಿ ನೀಡಿದರು.

ಅದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್, ಹೆಚ್ಚು ಅನುದಾನ ಕೇಳುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಅದರ ಹೆಸರಿನಲ್ಲಿ ರಾಜಕಾರಣ ಮಾಡಲು ಬಿಡುವುದಿಲ್ಲ. ಸಚಿವರು ಉತ್ತರ ನೀಡುವಾಗ ದೇವಸ್ಥಾನಗಳ ಎ, ಬಿ, ಸಿ ವರ್ಗೀಕರಣ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ದೇವರನ್ನು ಶ್ರೇಣೀಕರಣ ವ್ಯವಸ್ಥೆಗೆ ತರಲಾಗಿದೆ. ಮೂಲಭೂತವಾಗಿ ಈ ಬಗ್ಗೆ ಚರ್ಚೆಯಾಗಬೇಕು. ಆದರೆ ಧರ್ಮಾಂತರವಾಗಿ ಚರ್ಚೆಯಾಗುತ್ತಿದೆ. ದೊಡ್ಡ ದೊಡ್ಡ ದೇವಸ್ಥಾನಗಳ ಅನುದಾನ ಅಥವಾ ಆದಾಯ ಸಣ್ಣಪುಟ್ಟ ದೇವಸ್ಥಾನಗಳ ಜತೆ ಹಂಚಿಕೆಯಾಗುವುದಿಲ್ಲ. ಆರಾಧನಾ ಯೋಜನೆಯಡಿ ಸಣ್ಣ ದೇವಸ್ಥಾನಗಳು ಅನುದಾನ ಪಡೆಯುತ್ತವೆ. ಅವು ಬಹುತೇಕ ದಲಿತರು ಪೂಜಿಸುವ ದೇವಸ್ಥಾನಗಳಾಗಿರುತ್ತವೆ. ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ವಿಷಯಾಂತರ ಮಾಡುವುದು ಸರಿಯಲ್ಲ ಎಂದರು.
ಅನುದಾನ ಹೆಚ್ಚಳವಾಗಬೇಕು ಎಂಬ ಬೇಡಿಕೆಗೆ ಬಹುತೇಕ ಶಾಸಕರು ಸಹಮತ ವ್ಯಕ್ತಪಡಿಸಿದರು.

Facebook Comments