ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆಯಿಂದ 6 ತಿಂಗಳಲ್ಲಿ 3733 ಕೋಟಿ ತೆರಿಗೆ ಬಾಕಿ

ಈ ಸುದ್ದಿಯನ್ನು ಶೇರ್ ಮಾಡಿ

kj jಬೆಳಗಾವಿ(ಸುವರ್ಣಸೌಧ), ಡಿ.17- ಬಿಡದಿ ಬಳಿ ಇರುವ ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಕರ್ನಾಟಕ ಸರ್ಕಾರಕ್ಕೆ ಮುಂದಿನ ಆರು ತಿಂಗಳ ನಂತರ 3733 ಕೋಟಿ ರೂ. ತೆರಿಗೆಯನ್ನು ಪಾವತಿಸಬೇಕಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಅವರು ಪ್ರಶ್ನೆ ಕೇಳಿ, 1998ರಲ್ಲಿ ಪ್ರಾರಂಭವಾದ ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆ 20 ವರ್ಷ ಪೂರ್ಣಗೊಳಿಸಿದೆ. ಆ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಳ್ಳುವಾಗ ಕಾರ್ಖಾನೆಯವರು ಪ್ರತಿ ವರ್ಷ ಮೂರುಸಾವಿರ ಡಾಲರ್ ಹೊಸದಾಗಿ ಬಂಡವಾಳ ಹೂಡಿಕೆ ಮಾಡಿ ಜಪಾನ್ ತಂತ್ರಜ್ಞಾನಗಳನ್ನು ತಂದು ಇಲ್ಲಿ ಹೊಸ ಹೊಸ ಉತ್ಪಾದನೆಗಳನ್ನು ತಯಾರಿಸುವುದಾಗಿ ಭರವಸೆ ನೀಡಿದ್ದರು ರಾಜ್ಯ ಸರ್ಕಾರ 2ಸಾವಿರ ಎಕರೆ ವರೆಗಿನ ಭೂಮಿ ಮತ್ತು 18 ವರ್ಷದ ವರೆಗೆ ತೆರಿಗೆ ಪಾವತಿಗೆ ಕಾಲಮಿತಿ ವಿನಾಯ್ತಿ ನೀಡಿದೆ. ಈಗ 18 ವರ್ಷ ತುಂಬಿದೆ. ಸರ್ಕಾರಕ್ಕೆ ಅವರು ಎಷ್ಟು ಕೋಟಿ ತೆರಿಗೆ ಕೊಡಬೇಕೆಂದು ಪ್ರಶ್ನಿಸಿದರು.

ಆಗ ಉತ್ತರ ನೀಡಿದ ಸಚಿವ ಕೆ.ಜೆ.ಜಾರ್ಜ್, ಕಿರ್ಲೋಸ್ಕರ್ ಸಂಸ್ಥೆ 1990 ಡಿ.24 ಮತ್ತು 2010 ಡಿ.21 ಈ ಎರಡು ಹಂತಗಳಲ್ಲಿ ಕಾರ್ಖಾನೆ ಗಳನ್ನು ಆರಂಭಿಸಿದೆ. ಫಾರ್ಚೂನರ್ ಮತ್ತು ಇನೋವದಂತಹ ಉತ್ಪನ್ನಗಳನ್ನು ತಯಾರು ಮಾಡುತ್ತಿದೆ. ಕಾರ್ಖಾನೆ ಉತ್ತಮವಾಗಿ ನಡೆಯು ತ್ತಿದೆ. ಮೊದಲ ಹಂತದ ತೆರಿಗೆ ವಿನಾಯ್ತಿ ಕಾಲಮಿತಿ ಇನ್ನೂ ಆರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಸಂಸ್ಥೆ 3733 ಕೋಟಿ ರೂ.ವನ್ನು ಪಾವತಿಸಬೇಕಿದೆ. ಎರಡನೇ ಹಂತದಲ್ಲಿ 989 ಕೋಟಿ ರೂ. ಪಾವತಿಸಬೇಕಿತ್ತು. ಅದಕ್ಕೆ ಇನ್ನೂ 10 ವರ್ಷ ಕಾಲಾವಕಾಶವಿದೆ ಎಂದು ಹೇಳಿದರು.
ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶ ನೀಡಿದೆ. ಗ್ರೂಪ್ ಎನಲ್ಲಿ ಶೇ.71ರಷ್ಟು, ಗ್ರೂಪ್ ಬಿನಲ್ಲಿ ಶೇ.86, ಗ್ರೂಪ್ ಸಿನಲ್ಲಿ ಶೇ.99ರಷ್ಟು ಗ್ರೂಪ್ ಡಿನಲ್ಲಿ ಶೇ.100ರಷ್ಟು ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.

Facebook Comments