ಪ್ರತಿಯೊಂದು ಗ್ರಾಮಕ್ಕೂ ಶುದ್ಧ ಕುಡಿಯುವ ನೀರು ಜಲಧಾರೆ ಯೋಜನೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

kಬೆಳಗಾವಿ, ಡಿ.18- ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ವರ್ಷ ಪೂರ್ತಿ ಶುದ್ಧ ಘಟಕಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ಜಲಧಾರೆ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದೆ ಎಂದು ಸಚಿವ ಕೃಷ್ಣೇಭೈರೇಗೌಡ ಪರಿಷತ್‍ನಲ್ಲಿಂದು ತಿಳಿಸಿದರು. ನದಿ ಮೂಲಗಳಿಂದ ಸಿಗುವ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದ ಎಲ್ಲ ಗ್ರಾಮಗಳಿಗೂ ವರ್ಷ ಪೂರ್ತಿ ಶುದ್ಧ ಘಟಕಗಳ ಮೂಲಕ ಪೂರೈಕೆ ಮಾಡುವ ಯೋಜನೆಯೇ ಜಲಧಾರೆ. ಪ್ರತಿ ಹಳ್ಳಿಗಳಿಗೂ ಈ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುವುದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗವುದು ಎಂದು ಹೇಳಿದರು.ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಶುದ್ಧ ಘಟಕಗಳ ಮೂಲಕ ಕುಡಿಯುವ ನೀರು ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. ಇದೇ ಮಾದರಿಯಲ್ಲಿ ಜಲಧಾರೆ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. ಇದರಿಂದ ನೀರಿನ ಸಮಸ್ಯೆ ಒಂದಿಷ್ಟು ಪರಿಹಾರವಾಗುವ ನಿರೀಕ್ಷೆ ಇದೆ ಎಂದರು.

ರಾಜ್ಯದಲ್ಲಿ ಸುಮಾರು 400ರಿಂದ 500 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಸರ್ಕಾರ ನೀರಿನ ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮಗಳನ್ನುಕೈಗೊಂಡಿದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೋ ಅಂಥ ಕಡೆ ಖಾಸಗಿಯವರಿಂದ ಟ್ಯಾಂಕರ್‍ಗಳ ಮೂಲಕ ನೀರನ್ನು ಖರೀದಿಸಿ ಪೂರೈಕೆ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಲಭ್ಯವಿದೆಯೋ ಅಂತಹ ಕಡೆ ನೀರನ್ನು ಲಭ್ಯತೆ ಆಧಾರದ ಮೇಲೆ ಪೂರೈಕೆ ಮಾಡುತ್ತೇವೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಕೊಳವೆಬಾವಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ನೀರು ಪೂರೈಸಲು ಸರ್ಕಾರ ತುರ್ತು ಕ್ರಮ ಕೈಗೊಂಡಿದೆ.

ರಾಜ್ಯಾದ್ಯಂತ ಗ್ರಾಮಸಂಪರ್ಕಕ್ಕೆ ಬಾಕಿ ಇರುವ ರಸ್ತೆಗಳನ್ನು ಅಭಿವೃದ್ದಿಪಡಿಸಲು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಮೂರನೇ ಹಂತದ ಅನುದಾನ ನಮಗೆ ಸಿಕ್ಕಿಲ್ಲ. ನಾಲ್ಕೈದು ವರ್ಷದಿಂದ ಅನುದಾನ ಲಭ್ಯತೆ ಇಲ್ಲದ ಕಾರಣ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಈ ಅನುದಾನ ಸಿಕ್ಕರೆ ರಸ್ತೆಗಳ ಅಭಿವೃದ್ದಿಗೆ ತುರ್ತು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನದ ಲಭ್ಯತೆ ಮೇಲೆ ಕಾಮಗಾರಿಗಳನ್ನು ನಿರ್ವಹಣೆ ಮಾಡಲಿದೆ ಎಂದರು.

ಇನ್ನು ಮುಂದೆ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದಲೇ ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು. ಜಿಲ್ಲಾ ಹಂತದಲ್ಲಿ ಇದನ್ನು ನಮ್ಮ ಇಲಾಖೆಯವರೇ ನಿರ್ವಹಣೆ ಮಾಡುತ್ತಾರೆ ಎಂದು ಹೇಳಿದರು.

Facebook Comments