ಸದ್ಯದಲ್ಲಿಯೇ ಕರ್ನಾಟಕ ಬಯಲು ಶೌಚಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

krishna byre gowdaಬೆಳಗಾವಿ,ಡಿ.18- ಬರುವ ಜನವರಿ ತಿಂಗಳ ಅಂತ್ಯಕ್ಕೆ ಕರ್ನಾಟಕ ಶೇ.99ರಷ್ಟು ಬಯಲು ಬಹಿರ್ದೆಸೆ ಮುಕ್ತ ಆಗಲಿದೆ ಎಂದು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‍ಗೆ ತಿಳಿಸಿದರು. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 90.26 ಲಕ್ಷ ಕುಟುಂಬಗಳಿದ್ದು, ಇದರಲ್ಲಿ 24.83 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿವೆ. 45.42 ಲಕ್ಷ ಕುಟುಂಬಗಳು ಶೌಚಾಲಯ ರಹಿತ ಎಂದು ಬೇಸ್‍ಲೈನ್ ಎಂಬ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ ಎಂದರು.

ಸದಸ್ಯ ಎನ್.ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಮತ್ತು ನಿರ್ಮಲ ಭಾರತ್‍ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಈವರೆಗೂ 45, 42,000 ಕುಟುಂಬಗಳಿಗೆ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದೇವೆ. ಜನವರಿ ತಿಂಗಳ ಅಂತ್ಯಕ್ಕೆ 4,60,000 ಕುಟುಂಬಗಳಿಗೆ ಶೌಚಾಲಯ ಹಸ್ತಾಂತರಿಸಲಾಗುವುದು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಒಂದು ಶೌಚಾಲಯಕ್ಕೆ 12 ಸಾವಿರ ರೂ. ಅನುದಾನ ನೀಡಲಾಗುವುದು. ಈಗಾಗಲೇ ಶೇ.99ರಷ್ಟು ಕೆಲಸ ಪೂರ್ಣಗೊಂಡಿದ್ದು, ಜನವರಿ ತಿಂಗಳಿಗೆ ಬಳಕೆಗೆ ಲಭ್ಯವಾಗಲಿದೆ. ಕರ್ನಾಟಕವು ಈ ವರ್ಷಾಂತ್ಯಕ್ಕೆ ಶೇ.99ರಷ್ಟು ಬಯಲು ಬಹಿರ್ದೆಸೆ ಮುಕ್ತವಾಗಲಿದೆ ಎಂದರು.

ಕೆಲವು ಕಡೆ ಶೌಚಾಲಯಗಳಿದ್ದರೂ ಅದನ್ನು ಬಳಕೆ ಮಾಡಲು ಜನರು ಮೀನಾಮೇಷ ಎಣಿಸುತ್ತಾರೆ. ಇಂತಹ ಕಡೆ ನಮ್ಮ ಇಲಾಖೆ ವತಿಯಿಂದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಶೌಚಾಲಯ ಬಳಕೆ ಮಾಡದಿದ್ದರೆ ಉಂಟಾಗುವ ದುಷ್ಪರಿಣಾಮ, ಪರಿಸರದ ಮೇಲಾಗುವ ಹಾನಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿರುವ 12 ಸಾವಿರ ಅನುದಾನ ಕಡಿಮೆಯಾಗಿದೆ ಎಂದು ಸದಸ್ಯರು ಸಚಿವರ ಗಮನಕ್ಕೆ ತಂದಾಗ, ಈ ಅನುದಾನವನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ನಮ್ಮ ಇಲಾಖೆಯ ಇತಿಮಿತಿ ಹಾಗೂ ಆರ್ಥಿಕ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಅನುದಾನ ನೀಡುತ್ತಿದ್ದೇವೆ. ಅನುದಾನ ಹೆಚ್ಚಳ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.

Facebook Comments