ಸಂಪುಟ ವಿಸ್ತರಣೆ ಖಚಿತ

ಈ ಸುದ್ದಿಯನ್ನು ಶೇರ್ ಮಾಡಿ

ss cmಬೆಳಗಾವಿ, ಡಿ.18- ಶಾಸಕರು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಭರವಸೆ ನೀಡಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ವಾಗಿದೆ ಎಂಬ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದನ್ನು ಸರಿಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಶಾಸಕಾಂಗ ಸಭೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಯಾವುದೇ ಗದ್ದಲ, ಗೊಂದಲಗಳಿಲ್ಲ. ಕೆಲವು ಶಾಸಕರು ಗೈರು ಹಾಜರಾಗಿದ್ದಾರೆ. ಆದರೆ ಅದಕ್ಕೆ ಸಕಾರಣ ನೀಡಿ ಪತ್ರ ಬರೆದಿದ್ದಾರೆ. ಶಾಸಕಾಂಗ ಸಭೆ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಶೇ100ಕ್ಕೆ 100ರಷ್ಟು ಹಾಜರಾತಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.ಸಂಪುಟ ವಿಸ್ತರಣೆ ಮತ್ತು ಸಂಪುಟ ಪುನಾರಚನೆ ಎರೂಡ ವಿಷಯಗಳು ಚರ್ಚೆಯಲ್ಲಿವೆ. ಸಾಧ್ಯವಾದರೆ ಎರಡನ್ನೂ ಮಾಡುತ್ತೇವೆ. ಇಲ್ಲವಾದರೆ ಯಾವುದು ಸೂಕ್ತವೋ ಅದನ್ನೇ ಮಾಡುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಕೇಳುವ ಮೊದಲೇ ನಾವು ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟವಾಗಿ ಭರವಸೆ ನೀಡಿದ್ದೇವೆ. ಇದೇ ತಿಂಗಳ 20 ರಂದು ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಲು ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ನಾನು ದೆಹಲಿಗೆ ತೆರಳುತ್ತಿದ್ದೇವೆ.
ಅಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಲಿದ್ದೇವೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಈಗಿರುವವರ ಪೈಕಿ ಯಾರನ್ನು ಕೈ ಬಿಡಬೇಕು ಎಂಬ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿದ ಬಳಿಕ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂಬ ಹಿನ್ನೆಲೆ ಯಲ್ಲಿ ಇಂದು ನಡೆದ ಸಿಎಲ್‍ಪಿ ಸಭೆ ಭಾರೀ ಕುತೂಹಲ ಮೂಡಿಸಿತ್ತು.
ಕಾಂಗ್ರೆಸ್ ಶಾಸಕರ ಅಸಮಾಧಾನ ಹೊಗೆ ನಡುವೆ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಕೆಲವು ಶಾಸಕರಷ್ಟೇ ಮಾತನಾಡಿದ್ದು, ಒಬೊಬ್ಬರು ಒದೊಂದು ವಿಷಯ ವನ್ನು ಆಯ್ದುಕೊಂಡು ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ.

ಕೆಲವರು ರಾಜಕೀಯ ತಾರತಮ್ಯ, ಇನ್ನು ಕೆಲವರು ಅಭಿವೃದ್ಧಿ, ಮತ್ತಷ್ಟು ಮಂದಿ ಮೈತ್ರಿ ಸರ್ಕಾರದ ಗೊಂದಲಗಳ ಬಗ್ಗೆ ವಿವರಣೆ ಮಾಡಿದ್ದಾರೆ.
ಶಾಸಕಾಂಗ ಸಭೆಯಲ್ಲಿ ಭಾರೀ ಪ್ರಮಾಣದ ಗದ್ದಲವಾಗುತ್ತದೆ ಎಂಬ ನಿರೀಕ್ಷೆಗಳು ಹುಸಿಯಾಗಿವೆ.

Facebook Comments