ಧರ್ಮೇಗೌಡ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

DMಬೆಳಗಾವಿ (ಸುವರ್ಣಸೌಧ), ಡಿ.19- ವಿಧಾನ ಪರಿಷತ್‍ನ ನೂತನ ಉಪ ಸಭಾಪತಿಯಾಗಿ ಜೆಡಿಎಸ್‍ನ ಹಿರಿಯ ಮುಖಂಡ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಇಂದು ಬೆಳಗ್ಗೆ ಪರಿಷತ್‍ನ ಕಲಾಪ ಆರಂಭವಾಗುತ್ತಿ ದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಎಸ್.ಎಲ್.ಧರ್ಮೇಗೌಡ ಅವರು ಪರಿಷತ್‍ನ ಉಪಸಭಾಪತಿಯಾಗಿ ಅವಿರೋಧ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು.

ನಂತರ ಧರ್ಮೇಗೌಡ ಅವರನ್ನು ಆಡಳಿತ ಪಕ್ಷದ ನಾಯಕಿ ಡಾ.ಜಯಮಾಲಾ, ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಸದಸ್ಯರಾದ ನಾರಾಯಣ ಸ್ವಾಮಿ, ಶ್ರೀಕಂಠೇಗೌಡ, ಚೌಡಾರೆಡ್ಡಿ ತೂಪಲ್ಲಿ ಸೇರಿದಂತೆ ಮತ್ತಿತರರು ಉಪಸಭಾಪತಿ ಸ್ಥಾನದ ಪೀಠಕ್ಕೆ ಆತ್ಮೀಯವಾಗಿ ಧರ್ಮೇಗೌಡರನ್ನು ಕರೆ ತಂದರು.
ನಂತರ ಸಭಾ ನಾಯಕಿ ಜಯಮಾಲಾ ಮಾತನಾಡಿ, ಉಪಸಭಾಪತಿ ಸ್ಥಾನಕ್ಕೆ ಎಸ್.ಎಲ್.ಧರ್ಮೇಗೌಡ ಅವರು ಆಯ್ಕೆಯಾಗಿರುವುದು ಸೂಕ್ತ ಹಾಗೂ ಗೌರವವೂ ಹೌದು. ಸಹಕಾರಿ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು ಈ ಸದನದ ಘನತೆಯನ್ನು ಇನ್ನಷ್ಟು ಎತ್ತಿ ಹಿಡಿಯಲಿದ್ದಾರೆ.ದು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. ಹಿಂದೆ ಮಹಾಭಾರತದಲ್ಲಿ ಧರ್ಮರಾಯ ಯಾವ ರೀತಿ ರಾಜಧರ್ಮ ಪಾಲನೆ ಮಾಡಿದ್ದರೋ ಅದೇ ರೀತಿ ಈ ಸದನದ ಸತ್‍ಸಂಪ್ರದಾಯವನ್ನು ಪಾಲನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕು ಎಂದರು. ನಾನು ಮಂಗಳೂರಿನಲ್ಲಿ ಹುಟ್ಟಿದ್ದರೂ ಚಿಕ್ಕಮಗಳೂರಿ ನಲ್ಲಿ ಬೆಳೆದಿದ್ದೇನೆ. ನನಗೆ ಚಿಕ್ಕಮಗಳೂರು ಹೆಚ್ಚು ಚಿರಪರಿಚಿತ ಜಿಲ್ಲೆ. ಧರ್ಮೇಗೌಡರ ಬಗ್ಗೆ ವೈಯಕ್ತಿಕವಾಗಿ ತಿಳಿದಿದ್ದೇನೆ. ನಿನ್ನೆ ಬರಗಾಲದ ಕುರಿತು ಮಾತನಾಡುವಾಗ ಹೆಚ್ಚು ಪರಿಣಾಮಕಾರಿಯಾದ ಸಲಹೆಗಳನ್ನು ಸರ್ಕಾರಕ್ಕೆ ತಿಳಿಸಿದ್ದಾರೆ. ಉಸಭಾಪತಿಯಾಗಿ ಇನ್ನಷ್ಟು ಯಶಸ್ವಿಯಾಗಲಿ ಎಂದು ಆಶಿಸಿದರು.

ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ್‍ಪೂಜಾರಿ ಮಾತನಾಡಿ, ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದು ಈ ಸದನದ ಗೌರವ ಹೆಚ್ಚಿಸಿದೆ. ಹಿಂದೆ ಸಭಾಪತಿ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಗ್ರಾಮ ಪಂಚಾಯ್ತಿಯಿಂದ ಹಿಡಿದು ಉಪ ಸಭಾಪತಿ ಸ್ಥಾನದವರೆಗೆ ಬೆಳೆದು ಬಂದಿರುವುದು ಅವರ ಹಿರಿಮೆ. ಸುಮಾರು 40 ರಾಷ್ಟ್ರಗಳಲ್ಲಿ ಸುತ್ತಾಡಿ ಅಧ್ಯಯನ ನಡೆಸಿದ್ದಾರೆ. ಇಂದು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಈ ಸದನದ ಹಿರಿಮೆಯನ್ನು ಮತ್ತಷ್ಟು ಹÉಚ್ಚು ಮಾಡಿದ್ದಾರೆ ಎಂದು ಹೇಳಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ಟೀಕೆ ಮಾಡುವುದು ಸರ್ವೆಸಾಮಾನ್ಯ. ಸರ್ಕಾರ ಎಲ್ಲೋ ಒಂದು ಕಡೆ ದಾರಿ ತಪ್ಪಿ ಹೋದಾಗ ಚಾಟಿ ಬೀಸುವುದು ನಮ್ಮ ಕರ್ತವ್ಯ. ನೀವು ಉಪಸಭಾಪತಿ ಸ್ಥಾನದಲ್ಲಿ ಕುಳಿತು ನಿಷ್ಪಕ್ಷಪಾತವಾಗಿ ಕೆಲಸ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ. ಧರ್ಮರಾಯ ಹೇಗೆ ಧರ್ಮಪಾಲನೆಗೆ ಬದ್ಧರಾಗಿದ್ದರೋ ನೀವೂ ಕೂಡ ಅದೇ ರೀತಿ ಈ ಸದನದ ಹಿರಿಮೆಯನ್ನು ಉಳಿಸಬೇಕೆಂದು ಮನವಿ ಮಾಡಿದರು.

ಬೃಹತ್ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ನಾನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾದ ಮೇಲೆ ಧರ್ಮೇಗೌಡರು ನನಗೆ ಹೆಚ್ಚು ಆತ್ಮೀಯ ರಾಗಿದ್ದಾರೆ. ಸಾರ್ವಜನಿಕರ ಮೇಲೆ ಅವರಿಗಿರುವ ಕಳಕಳಿ ಎಲ್ಲರಿಗೂ ಮಾದರಿ. ಅಭಿವೃದ್ಧಿ ವಿಷಯದಲ್ಲಿ ಅವರ ಬದ್ಧತೆಯನ್ನು ಯಾರೊಬ್ಬರೂ ಪ್ರಶ್ನಿಸಲಾರರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಷತ್‍ನ ಪ್ರತಿಪಕ್ಷದ ಉಪ ನಾಯಕ ನಾರಾಯಣ ಸ್ವಾಮಿ ಮಾತನಾಡಿ, ಈ ಸದನ ಒಂದು ಅತ್ಯುತ್ತಮವಾದ ನಿದರ್ಶನಕ್ಕೆ ಕಾರಣೀ ಭೂತವಾಗಿದೆ. ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ದೇಶಕ್ಕೆ ಹೊಸ ಸಂದೇಶ ನೀಡಲಾಗಿದೆ. ಧರ್ಮೇಗೌಡರು ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗು ವುದರಲ್ಲಿ ಪ್ರತಿಪಕ್ಷಗಳ ಕೊಡುಗೆ ಇದೆ. ನೀವು ಪೀಠದಲ್ಲಿ ಧರ್ಮಪಾಲನೆ ಮಾಡುವಾಗ ನಿಮ್ಮ ಸಹೋದರ ಭೋಜೇಗೌಡರನ್ನು ನಿಯಂತ್ರಣ ಮಾಡಿದರೆ ಸಾಕು ಇಡೀ ಸದನ ಸುಸೂತ್ರವಾಗಿ ನಡೆಯುತ್ತದೆ ಎಂದು ಹಾಸ್ಯಚಟಾಕಿ ಹಾರಿಸಿದರು.
ಸದಸ್ಯರಾದ ಎಂ.ಕೆ.ಪ್ರಾಣೇಶ್, ಆಯನೂರು ಮಂಜುನಾಥ್, ತೇಜಸ್ವಿನಿ ರಮೇಶ್‍ಗೌಡ ಸೇರಿದಂತೆ ಮತ್ತಿತರರು ಮಾತನಾಡಿದರು.

Facebook Comments