ಜಿಸ್ಯಾಟ್-7ಎ ಯಶಸ್ವಿ ಉಡಾವಣೆ :ವಿಶ್ವದ ಗಮನ ಸೆಳೆದಿದೆ ಇಸ್ರೋ

ಈ ಸುದ್ದಿಯನ್ನು ಶೇರ್ ಮಾಡಿ

SSSಶ್ರೀಹರಿಕೋಟಾ, ಡಿ.19- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಜಿಸ್ಯಾಟ್-7ಎ ಸಂವಹನ ಉಪಗ್ರಹದ ಉಡ್ಡಯನ ಯಶಸ್ವಿಯಾಗಿದೆ. ಹಲವು ಸಾಧನೆಗಳೊಂದಿಗೆ ಇಸ್ರೋ ಈ ಯಶಸ್ವಿ ವರ್ಷದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ-ಎಫ್ 11 ರಾಕೆಟ್ ಮೂಲಕ ಇಂದು ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಯಿತು. ನಂತರ ನಿಗದಿತ ಸಮಯದಲ್ಲಿ ನಿರ್ದಿಷ್ಟ ಕಕ್ಷೆಗೆ ಸೇರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಒಟ್ಟು 2,250 ಕೆಜಿ ತೂಕದ ಜಿಸ್ಯಾಟ್-7ಎ ಇಸ್ರೋದ 35ನೇ ಸಂವಹನ ಉಪಗ್ರಹ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಕೆಯು-ಬ್ಯಾಂಡ್ ಮೂಲಕ ಸಂವಹನ ಸೌಲಭ್ಯ ನೀಡಲಿದೆ. ಭಾರತೀಯ ಬಾಯು ಪಡೆಗೆ(ಐಎಫ್) ಸುಗಮ ಸಂವಹನ ಕಲ್ಪಿಸಿಕೊಡುವುದು ಜಿಸ್ಯಾಟ್-7ಎ ಮೂಲ ಉದ್ದೇಶ. ದೇಶೀಯ ಜಿಎಸ್‍ಎಲ್‍ವಿ ರಾಕೆಟ್‍ಗೆ ಇದು 13ನೇ ಯಶಸ್ವಿ ಹಾರಾಟವಾಗಿದೆ. ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸುವ ನಿಟ್ಟಿನಲ್ಲಿ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಜೊತೆ ಜಿಎಸ್‍ಎಲ್‍ವಿ ಹಾರಾಟ ಕೈಗೊಳ್ಳುತ್ತಿರುವ ಏಳನೇ ಮಹತ್ವದ ಯೋಜನೆ ಇದಾಗಿದೆ. ಇಸ್ರೋ ಪಾಲಿಗೆ 2018 ಅತ್ಯಂತ ಮಹತ್ವದ ವರ್ಷ. ಅನೇಕ ವಿಶ್ವ ವಿಕ್ರಮಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಜನವರಿ 12ರಂದು ಉಪಗ್ರಹ ಉಡಾವಣೆಯಲ್ಲಿ ಶತಕದ ಮಹತ್ಸಾಧನೆ ಮೂಲಕ ಹೊಸ ಐತಿಹಾಸಿಕ ದಾಖಲೆ ನಿರ್ಮಿಸಿತು. ಒಂದೇ ಬಾರಿಗೆ 31 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿ ಅಂತರಿಕ್ಷಾದಲ್ಲಿ ಇಸ್ರೋದ 100 ಉಡಾವಣೆ ಅತ್ಯಂತ ಯಶಸ್ವಿಯಾಗಿ ಇಡೀ ವಿಶ್ವವೇ ಭಾರತದ ಶತಕದ ದಾಖಲೆಗೆ ತಲೆದೂಗಿತ್ತು.

ಏಪ್ರಿಲ್ 11ರಂದು ಪಥದರ್ಶಿ ಉಪಗ್ರಹವನ್ನು ಇಸ್ರೋ ನಭಕ್ಕೆ ಚಿಮ್ಮಿಸುವಲ್ಲಿ ಸಫಲವಾಗಿತ್ತು.
ನ.29ರಂದು ಪಿಎಸ್‍ಎಲ್‍ವಿ-ಸಿ43 ಎಂಬ ಭೂಮಿಯ ಮೇಲೆ ಹದ್ದಿನ ಕಣ್ಣಿಡುವ ಹೈಸಿಸ್ ಉಪಗ್ರಹ ಮತ್ತು ಇತರ ಎಂಟು ಪುಟ್ಟ ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡ್ಡಯನ ನಡೆಸಿತ್ತು.
ಇದಲ್ಲದೇ, ಅನೇಕ ಅನ್ವೇಷಣಾತ್ಮ ಸಂಶೋಧನೆ ಮತ್ತು ಪ್ರಯೋಗಗಳಲ್ಲಿಯೂ ಇಸ್ರೋ ಗಮನಸೆಳೆದಿದೆ.

Facebook Comments