ಕಸ್ತೂರಿರಂಗನ್ ವರದಿ ತಿರಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

VPಬೆಳಗಾವಿ(ಸುವರ್ಣಸೌಧ), ಡಿ.19-ಪಶ್ಚಿಮ ಘಟ್ಟ ಪ್ರದೇಶಗಳಿಗೆ ಹಾನಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿರುವ ಡಾ.ಕಸ್ತೂರಿ ರಂಗನ್‍ವರದಿಯನ್ನು ರಾಜ್ಯ ಸರ್ಕಾರ ಸರಾಸಗಟಾಗಿ ತಿರಸ್ಕಾರ ಮಾಡಲಿದೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಸಚಿವ ಸಂಪುಟ ಉಪಸಮಿತಿಯಲ್ಲಿ ಡಾ.ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಪುನಃ ಕೇಂದ್ರ ಸರ್ಕಾರ ನಮಗೆ ಮೂರರಿಂದ ನಾಲ್ಕು ಬಾರಿ ಮರುಪರಿಶೀಲನೆ ಮಾಡಲು ಕಳುಹಿಸಿಕೊಟ್ಟಿದೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಸರಾಸಗಟಾಗಿ ತಿರಸ್ಕರಿಸಲಿದ್ದೇವೆ. ವರದಿ ಅನುಷ್ಟಾನ ಮಾಡಿದರೆ ಜನರ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ವರದಿಯನ್ನು ಯಾವುದೇ ಕಾರಣಕ್ಕೂ ಅನುಷ್ಟಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅರಣ್ಯ ಇಲಾಖೆಯು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂಧೂರಿನಲ್ಲಿ ಸೇತುವೆ ನಿರ್ಮಾಣ ಮಾಡಲು ಈಗಾಗಲೇ ಅನುಮತಿಯನ್ನು ನೀಡಿದೆ. ವೆಬ್ ಕೋರ್ಟ್ ಮೂಲಕ ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇದೇ ರೀತಿ ಮಡಿಕೇರಿ-ಕೇರಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯ ಐವಾನ್ ಡಿಸೋಜಾ, ಡಾ.ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಇದನ್ನು ಅನುಷ್ಟಾನ ಮಾಡಿದರೆ ಸುಮಾರು 10 ಜಿಲ್ಲೆಗಳಲ್ಲಿ ಅಡಿಕೆ, ರಬ್ಬರ್ ತೋಟಗಳು ಹಾಗೂ ಜಮೀನುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅನೇಕ ಕಡೆ ಅರಣ್ಯಗಳಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿರುವವರನ್ನು ಸ್ಥಳಾಂತರ ಮಾಡಬೇಕಾಗುತ್ತದೆ ಎಂದರು.

ಅವರಿಗೆ ಪರ್ಯಾಯ ವ್ಯವಸ್ಥೆ ಎಲ್ಲಿಂದ ಕಲ್ಪಿಸುವುದು. ಈಗಾಗಲೇ ಅನೇಕ ರಾಜ್ಯಗಳು ಈ ವರದಿಯನ್ನು ತಿರಿಸ್ಕರಿಸಿರುವುದರಿಂದ ರಾಜ್ಯ ಸರ್ಕಾರವೂ ಇದೇ ಕ್ರಮವನ್ನು ಅನುಸರಿಸಬೇಕು. ಸಾಧ್ಯವಾದರೆ ಸುಪ್ರೀಂಕೋರ್ಟ್‍ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‍ನ ಸದಸ್ಯ ಸಿ.ಎಂ.ಇಬ್ರಾಹಿಂ ಯಾವುದೇ ಕಾರಣಕ್ಕೂ ಡಾ.ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡಬಾರದು. ಅಧಿಕಾರಿಗಳು ಕೇವಲ ಅಡಕೆ ಮತ್ತು ರಬ್ಬರ್ ತೋಟಗಳು, ರೈತರ ಜಮೀನನ್ನು ತೋರಿಸಿ ಕೇಂದ್ರದ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೇರಳ ಸರ್ಕಾರ ಈಗಾಗಲೇ ತಿರಸ್ಕರಿಸಿರುವುದರಿಂದ ರಾಜ್ಯಸರ್ಕಾರವೂ ಇದೇ ಕ್ರಮ ಏಕೆ ಕೈಗೊಳ್ಳಬಾರದೆಂದು ಪ್ರಶ್ನಿಸಿದರು.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

Facebook Comments