ಸಚಿವರ ಉತ್ತರಕ್ಕೆ ಆಕ್ಷೇಪ!

ಈ ಸುದ್ದಿಯನ್ನು ಶೇರ್ ಮಾಡಿ

SSಬೆಳಗಾವಿ (ಸುವರ್ಣಸೌಧ), ಡಿ.19- ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸದೆ ಮೊದಲು ಕಂದಾಯ, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವ, ಪಶುಸಂಗೋಪನೆ ಹಾಗೂ ಕೃಷಿ ಸಚಿವರಿಂದ ಉತ್ತರ ಕೊಡಿಸಿದ ಬಗ್ಗೆ ಸಂಪುಟ ಸಚಿವರೆ ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಡೆಯಿತು.

ವಿಧಾನಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು, ನಾನು ನಾಲ್ಕು ಬಾರಿ ಈ ಮನೆಯ ಸದಸ್ಯನಾಗಿದ್ದೇನೆ. ಯಾವುದೇ ಚರ್ಚೆಯಾದರೂ, ಮೊದಲು ಮುಖ್ಯಮಂತ್ರಿ ಉತ್ತರ ಕೊಡುತ್ತಿದ್ದರು. ಅನಂತರ ಸಚಿವರು ಉತ್ತರ ಕೊಡುತ್ತಿದ್ದರು. ಈ ಅಧಿವೇಶನದಲ್ಲಿ ಹೊಸ ಸಂಪ್ರದಾಯ ಆರಂಭಿಸಲಾಗಿದೆ. ಎಲ್ಲಾ ಸಚಿವರು ಉತ್ತರ ನೀಡಿದ ಮೇಲೆ ಮುಖ್ಯಮಂತ್ರಿಯವರಿಗೆ ಹೇಳಲು ಏನು ಉಳಿದಿರುತ್ತದೆ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ಬರಗಾಲ ಪರಿಸ್ಥಿತಿ ಬಗ್ಗೆ ಕಳೆದ ಮಂಗಳವಾರದಿಂದ ಸಮಯ ಸಿಕ್ಕಾಗಲೇಲ್ಲಾ ಚರ್ಚೆ ನಡೆದಿತ್ತು. ಸರಿ ಸುಮಾರು 9 ಗಂಟೆ ಚರ್ಚೆಯಾಗಿತ್ತು.

ಅದಕ್ಕೆ ನಿನ್ನೆ ಮುಖ್ಯಮಂತ್ರಿ ಉತ್ತರ ನೀಡಲು ಮುಂದಾದರು. ಆದರೆ ಪ್ರತಿಪಕ್ಷದ ನಾಯಕರಿಲ್ಲ ಎಂಬ ಕಾರಣಕ್ಕೆ ಸಭಾಧ್ಯಕ್ಷರು ನಾಳೆ ಉತ್ತರ ನೀಡಿ ಎಂದು ಸಲಹೆ ನೀಡಿದ್ದರು. ಇಂದು ಬೆಳಗ್ಗೆ ಸದನ ಆರಂಭವಾದಾಗ ಕಂದಾಯ ಸಚಿವರು ಉತ್ತರ ನೀಡಲಾರಂಭಿಸಿದರು. ನಂತರ ಗ್ರಾಮೀಣಾಭಿವೃದ್ಧಿ-ಪಂಚಾಯತ್‍ರಾಜ್ ಸಚಿವ ಕೃಷ್ಣಬೈರೇಗೌಡ, ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಕೃಷಿ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಉತ್ತರ ನೀಡಿದರು.
ಈ ಮಧ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಈ ರೀತಿ ಆಕ್ಷೇಪ ವ್ಯಕ್ತ ಪಡಿಸಿದರು.

Facebook Comments