ಕಡೂರು ತುಂಬಾ ನಾಯಿಗಳು ಸಾರ್ ನಾಯಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

dogsಕಡೂರು, ಡಿ.25- ಪಟ್ಟಣದ ಹಳೆಯ ಸಂತೆಯ ಮೈದಾನದೊಳಗೆ ನಿವ್ಯಾರು ಆಸ್ಥಳಕ್ಕೆ ಬಾರದೆ ಇದ್ದರೆ ಒಮ್ಮೆ ಬಂದು ಈ ನಾಯಿಗಳ ಪರಿವಾರವನ್ನು ಪ್ರತ್ಯಕ್ಷವಾಗಿ ನೋಡಿ ಹೋಗಿ.  ಇಲ್ಲಿ ಸುಮಾರು 500ಕ್ಕೂ ಹೆಚ್ಚು ನಾಯಿಗಳು ಸಂಜೆಯಾಗುತ್ತಿದ್ದಂತೆ ಒಂದಡೆ ಸೇರಿಕೊಳ್ಳುತ್ತವೆ. ಏಕಂತೀರಾ… ಮಟನ್ ಸ್ಟಾಲ್‍ನಲ್ಲೂ ಬಿಸಾಡುವ ತ್ಯಾಜ್ಯವನ್ನು ತಿನ್ನುವುದಕ್ಕೋಸ್ಕರ ಮುಗಿ ಬೀಳುತ್ತಿವೆ.ಒಮ್ಮೊಮ್ಮೆ ಹೊಟ್ಟೆ ತುಂಬಿದ ನಂತರ ವಿಹಾರಕ್ಕೆಂದು ಪಟ್ಟಣದ ಹಲವಾರು ಬೀದಿಗಳಲ್ಲಿ ತಂಡೋಪತಂಡವಾಗಿ ನಾಯಿಗಳು ಒಟ್ಟಿಗೆ ಹೋಗುತ್ತವೆ. ಪಟ್ಟಣದ ಜನತೆ ಇವುಗಳನ್ನು ನೋಡಿ ನಾಯಿಗಳು ಸಾರ್ ನಾಯಿಗಳು ಮೂಕ ವಿಸ್ಮಿತರಾಗಿ ಪುರಸಭೆಯವರನ್ನು ಶಪಿಸುತ್ತಾರೆ.

ಸಂಜೆ 7 ಗಂಟೆ ನೀವೇನಾದರೂ ಮಟನ್ ಸ್ಟಾಲ್ ಕಡೆ ಹೋದರೆ ಇದ್ಯಾವುದೋ ಕುರಿಗಳ ಮಂದೆ ಇರಬಹುದು ಎಂಬ ಭ್ರಮೆ ಮೂಡುತ್ತದೆ. ಹತ್ತಿರ ಹೋದರೆ ಸುಮಾರು 500ಕ್ಕೂ ಹೆಚ್ಚು ನಾಯಿಗಳು ಒಂದೆಡೆ ಸೇರುವುದನ್ನು ನೋಡಿದರೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಲಿದೆ. ರಾತ್ರಿ ಸಮಯದಲ್ಲಿ ಹಿಂಡು ಹಿಂಡಾಗಿ ಶ್ರೀ ಶಾರದ ಕಲ್ಯಾಣ ಮಂಟಪದ ಎದುರು ಮಲಗುವುದರಿಂದ ತಡ ರಾತ್ರಿಯಲ್ಲಿ ನಡೆದು ಬರುವವರಿಗೆ ಭಯ ಹುಟ್ಟಿಸುತ್ತಿವೆ. ಮಕ್ಕಳು, ವೃದ್ಧರು, ಈ ರಸ್ತೆಯಲ್ಲಿ ಓಡಾಡಲು ತುಂಬಾ ಹೆದರುತ್ತಾರೆ.

ಹಾಡ ಹಗಲೇ ರಾಜ್ಯ ರಸ್ತೆ ಸಾರಿಗೆಯ ಬಸ್ ನಿಲ್ದಾಣದ ಒಳಗಡೆ ಹಿಂಡು ಹಿಂಡಾಗಿ ರಾಜ ರೋಷವಾಗಿ ನಾಯಿಗಳು ತಿರುಗುತ್ತಿರುತ್ತವೆ. ಪ್ರಯಾಣಿಕರಿಗೂ ನಾಯಿಗಳ ಕಾಟ ತಪ್ಪಿದ್ದಲ್ಲ.ಇಡೀ ಪಟ್ಟಣದ ಗಲ್ಲಿ ಗಲ್ಲಿಗಳಲ್ಲೂ ತುಂಬಾ ಯಾರ ಹೆದರಿಕೆಯೂ ಇಲ್ಲದೆ ಓಡಾಡುವುದನ್ನು ನೋಡಿದರೆ ಜನ ಮನೆಯಿಂದ ಹೊರ ಬರಲು ಭಯಭೀತರಾಗುತ್ತಾರೆ. ನೂರಾರು ನಾಯಿಗಳು ರೈಲ್ವೆ ಗೇಟಿನ ಬಳಿಯೇ ವಾಸ್ತವ್ಯ ಹೂಡಿವೆ. ಆದರೆ ಇದುವರೆಗೂ ಯಾವೊಂದು ನಾಯಿಯೂ ಸಹ ರೈಲಿಗೆ ಸಿಕ್ಕ ಉದಾಹರಣೆ ಇಲ್ಲ.

ಮನುಷ್ಯನ ರೀತಿಯಲ್ಲಿ ರೈಲುಗಳು ಹೋಗುವಾಗ ನಿಂತು ರೈಲು ಹೋದ ನಂತರ ಅತ್ತ ಕಡೆ ದಾಟುತ್ತವೆ. ಕೆಲ ಸಮಯ ನಾಯಿಗಳು ಮಕ್ಕಳ ಮೇಲೆ ದೊಡ್ಡವರ ಮೇಲೂ ಎರಗಿರುವ ಪ್ರಕರಣಗಳಿವೆ.  ಪುರಸಭೆಯವರು ಮಾತ್ರ ನಾಯಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೆಚ್ಚಿನ ಅನಾಹುತಗಳು ಜರಗುವ ಮೊದಲು ದೊಡ್ಡ ಮಟ್ಟದಲ್ಲಿ ಇರುವ ನಾಯಿಗಳ ಸಂತತಿಗೆ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ಇನ್ನಾದರೂ ಪುರಸಭೆಯವರು ನಾಯಿಗಳಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Facebook Comments