‘ಬೀದಿ ನಾಯಿ ಮತ್ತು ಹಂದಿಗಳನ್ನು ಸಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

ckmಚಿಕ್ಕಮಗಳೂರು, ಡಿ.27- ಬೀದಿ ನಾಯಿ ಮತ್ತು ಹಂದಿಗಳನ್ನು ಸಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನಗರಸಭೆ ಆಯುಕ್ತೆ ತುಷಾರಾಮಣಿ ತಿಳಿಸಿದರು. ನಗರಸಭೆಯಲ್ಲಿ ಏರ್ಪಡಿಸಿದ್ದ ಬಜೆಟ್ ಪೂರ್ವ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರದ ಆದೇಶದ ಪ್ರಕಾರ ನಾಯಿ ಮತ್ತು ಹಂದಿಗಳನ್ನು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಒಂದು ನಾಯಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು 1,500 ರೂ. ಪಾವತಿಸಬೇಕು. ಹಣ ನೀಡಿದರೂ ವೈದ್ಯರ ಕೊರತೆ ಇದೆ. ಚಿಕಿತ್ಸೆ ನಂತರ ನೀಡುವ ಔಷಧಿಗಳು ದುಬಾರಿಯಾಗಿರುತ್ತದೆ. ಇವೆಲ್ಲವನ್ನು ನಗರಸಭೆಯಿಂದಲೇ ನೀಡಬೇಕು. ಈಗಿನ ಪರಿಸ್ಥಿತಿಯಲ್ಲಿ ನಗರಸಭೆ ಅನುದಾನದಲ್ಲಿ ಕಷ್ಟವಾಗುತ್ತದೆ ಎಂದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳೆದ ವಾರ 10ಕ್ಕೂ ಹೆಚ್ಚು ಸಾರ್ವಜನಿಕರಿಗೆ ನಾಯಿ ಕಚ್ಚಿದೆ. ಹಿಂಡು ಹಿಂಡಾಗಿ ನಾಯಿಗಳು ರಸ್ತೆಯಲ್ಲಿ ಓಡಾಡುತ್ತವೆ. ಇಲ್ಲಿಂದ ನಾಯಿಗಳನ್ನು ಸ್ಥಳಾಂತರ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ನೀವು ಸರ್ಕಾರವನ್ನು ಒತ್ತಾಯಿಸಿ ಎಂದು ಸಾರ್ವಜನಿಕರಿಗೆ ತಿಳಿಸಿದರು. ಬಿಎಸ್‍ಪಿ ಮುಖಂಡ ರಾಧಾಕೃಷ್ಣ ಮಾತನಾಡಿ, ನಗರದಲ್ಲಿ ಸಾಕಷ್ಟು ವಸತಿಗೃಹ ಇದ್ದು , ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ನಂಜುಂಡರಾವ್ ಮಾತನಾಡಿ, ನಗರಸಭೆ ಸಮಸ್ಯೆಗಳನ್ನು ಆಲಿಸಲು ಪ್ರತಿ ವಾರ್ಡ್‍ನಲ್ಲೂ ಸಭೆ ನಡೆಸಬೇಕೆಂದು ಮನವಿ ಮಾಡಿದರು.

ಸಾರ್ವಜನಿಕರಾದ ಆನಂದ್, ಕೃಷ್ಣ ಎಂಬುವರು ಮಾತನಾಡಿ, ನಗರಸಭೆಯಿಂದ ಶೌಚಾಲಯಗಳ ನಿರ್ಮಾಣದ ಅವಶ್ಯಕತೆ ಇದೆ. ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕೆಂದು ಬೇಡಿಕೆ ಇಟ್ಟಿದ್ದು , ಹಲವು ಉದ್ಯಾನವನಗಳನ್ನು ಸುಸ್ಥಿತಿಯಲ್ಲಿಡಬೇಕು. ಎಂಜಿ ರಸ್ತೆಯಲ್ಲಿರುವ ಹಳೆ ಮಾರ್ಕೆಟ್ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಶಿಲ್ಪ ರಾಜಶೇಖರ್ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜಿಸಬೇಕು. ನಗರದ ಕಟ್ಟಡ ಮಾಲೀಕರು ಇ ಖಾತೆ ವ್ಯಾಪ್ತಿಗೆ ಒಳಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷ ಸುಧೀರ್, ಸದಸ್ಯರಾದ ರಾಜಶೇಖರ್ ಮೊದಲಾದವರು ಇದ್ದರು. 2019-20ನೆ ಸಾಲಿನ ಆಯವ್ಯಯದ ಬಗ್ಗೆ ಸಾರ್ವಜನಿಕರ ಸಭೆ ಕರೆಯಲಾಗಿತ್ತು. ಬೆರಳೆಣಿಕೆಯಷ್ಟು ಜನ ಮಾತ್ರ ಭಾಗವಹಿಸಿದ್ದರು.

Facebook Comments