ನಾಪತ್ತೆಯಾಗಿದ್ದ ಕೇರಳದ ವ್ಯಕ್ತಿ ಪ್ರೇಯಸಿಯೊಂದಿಗೆ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

CKM boyಚಿಕ್ಕಮಗಳೂರು, ಡಿ.28-ತುಂಗಾನದಿ ಸೇತುವೆ ಬಳಿ ಬೈಕ್, ಬ್ಯಾಗ್, ವಾಚ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮೂಲತಃ ಕೇರಳದ ನಲ್ಲಾಳಂ ನಿವಾಸಿ ಸಂದೀಪ್ ಕೃಷ್ಣ ನ.24 ರಂದು ಬೈಕ್‍ನಲ್ಲಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಹೇಳಿ ಹೊರಟಿದ್ದು, ನಂತರ ಕಣ್ಮರೆಯಾಗಿದ್ದನು. ಈ ಬಗ್ಗೆ ಕೇರಳದಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಈ ನಡುವೆ ನ.25ರಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನಿಂದ ಹೊರಟು ಬಾಳೆಹೊನ್ನೂರಿಗೆ ಬಂದು ಅಲ್ಲಿಂದ 7,500 ರೂ.ಡ್ರಾ ಮಾಡಿಕೊಂಡು ಜಯಪುರಕ್ಕೆ ಬಂದು ಅಲ್ಲಿಂದ ಹರಿಹರಪುರದ ತುಂಗಾ ನದಿಯ ಬಳಿಯ ಸೇತುವೆ ಸಮೀಪ ಬೈಕ್ ನಿಲ್ಲಿಸಿ, ಕರವಸ್ತ್ರ, ವಾಚು, ಬ್ಯಾಗನ್ನು ಬಿಟ್ಟು ಇನ್ನೊಂದು ಬ್ಯಾಗನ್ನು ತೆಗೆದುಕೊಂಡು ಶೃಂಗೇರಿಗೆ ಹೋಗಿದ್ದಾನೆ. ಅಲ್ಲಿಂದ ಬಸ್ ಮುಖಾಂತರ ಮಂಗಳೂರಿಗೆ ಹೋಗಿ ಅಲ್ಲಿಂದ ರೈಲಿನಲಿ ಮುಂಬೈಗೆ ಹೋಗಿದ್ದನು.
ಮುಂಬೈ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದು, ಉದ್ಯೋಗ ಹುಡುಕುತ್ತಿದ್ದನು.

ಈ ನಡುವೆ ಡಿ.11 ರಂದು ಸುದೀಪ್‍ಕೃಷ್ಣನ ಗೆಳತಿ ಕಲ್ಪನಾ (ಹೆಸರು ಬದಲಿಸಲಾಗಿದೆ) ಕೂಡ ಕೇರಳದಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಕೇರಳ ಪೊಲೀಸರು ತನಿಖೆ ಕೈಗೊಂಡಿದ್ದರು. ಸಂದೀಪ್ ಕೃಷ್ಣ ಕಣ್ಮರೆಗೂ, ಕಲ್ಪನಾ ನಾಪತ್ತೆಗೂ ಹೊಂದಾಣಿಕೆ ಇರಬಹುದೆಂದು ಶಂಕೆ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ಕೇರಳ ಪೊಲೀಸರು ತನಿಖೆ ಕೈಗೊಂಡಿದ್ದರು. ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕ ಹರೀಶ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ಕೊಪ್ಪ ಠಾಣೆಯ ಉಪ ಅಧೀಕ್ಷಕರು, ಎನ್.ಪುರ. ವೃತ್ತ ನಿರೀಕ್ಷಕರು, ಹರಿಹರಪುರದ ಪಿಎಸ್‍ಐ ಹಾಗೂ ಸಿಬ್ಬಂದಿ ಅವರ ಸಹಕಾರದೊಂದಿಗೆ ಕೇರಳ ಪೊಲೀಸರು ತನಿಖೆ ನಡೆಸುತ್ತಿದ್ದರು.ನಾಪತ್ತೆಯಾಗಿದ್ದ ಸಂದೀಪ್ ಕೃಷ್ಣ, ಮುಂಬೈನಲ್ಲಿ ವಾಸವಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆತನನ್ನು ಕರೆತರಲು ತೆರಳಿದ್ದರು.

ಈ ವಿಷಯ ತಿಳಿದ ಸಂದೀಪ್‍ಕೃಷ್ಣ ತನ್ನ ಪ್ರೇಯಸಿಯೊಂದಿಗೆ ಪಂಜಾಬ್‍ನ ಲೂದಿಯಾನಕ್ಕೆ ಹೊರಟಿದ್ದರು. ತಕ್ಷಣ ಕೇರಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಂದೀಪ್‍ಕೃಷ್ಣ ಹಾಗೂ ಈತನ ಪ್ರೇಯಸಿಯನ್ನು ಪತ್ತೆ ಹಚ್ಚಿ ಹೆಚ್ಚಿನ ವಿಚಾರಣೆಗಾಗಿ ಕೇರಳಕ್ಕೆ ಕರೆದೊಯ್ದಿದ್ದಾರೆ.ಒಟ್ಟಾರೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಪ್ರೇಯಸಿ ಮನೆಯವರಿಗೆ ಹೆದರಿ ಸಂದೀಪ್ ಈ ರೀತಿ ವರ್ತಿಸಿದ್ದನೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Facebook Comments