ಕಾಶ್ಮೀರ ಕಣಿವೆಯಲ್ಲಿ ಯೋಧರಿಂದ ಭರ್ಜರಿ ಬೇಟೆ, 4 ಉಗ್ರರು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Firing--Pak-Border--01

ಶ್ರೀನಗರ, ಡಿ.29-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಬೇಟೆ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ. ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್‍ಕೌಂಟರ್‍ನಲ್ಲಿ ನಾಲ್ವರು ಭಯೋತ್ಪಾದಕರನ್ನು ಯೋಧರು ಹೊಡೆದುರುಳಿಸಿದ್ದಾರೆ. ಹತರಾದ ಉಗ್ರಗಾಮಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹಂಜನ್ ಪ್ರದೇಶದಲ್ಲಿ ಉಗ್ರರು ಅವಿತಿಟ್ಟುಕೊಂಡಿರುವ ಖಚಿತ ವರ್ತಮಾನದ ಮೇರೆಗೆ ನಿನ್ನೆ ಮಧ್ಯರಾತ್ರಿಯಿಂದಲೇ ಯೋಧರು ಆ ಸ್ಥಳವನ್ನು ಸುತ್ತುವರಿದು ಭಯೋತ್ಪಾದಕರಿಗಾಗಿ ಶೋಧ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಉಗ್ರರು ಭದ್ರತಾಪಡೆಗಳ ಮೇಲೆ ಗುಂಡು ಹಾರಿಸಿದರು.

ಕೆಲ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿ ವೇಳೆ ನಾಲ್ವರು ಉಗ್ರರು ಹತರಾದರು. ಮೃತ ಆತಂಕವಾದಿಗಳಿಂದ 4 ಎ.ಕೆ.-47 ರೈಫಲ್‍ಗಳು, ಮದ್ದುಗುಂಡುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.   ಎನ್‍ಕೌಂಟರ್ ವೇಳೆ ನಾಪತ್ತೆಯಾಗಿರುವ ಇತರ ಉಗ್ರರಿಗಾಗಿ ಶೋಧ ಮುಂದುವರೆದಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟ : ಈ ಮಧ್ಯೆ, ಜಮ್ಮುವಿನ ಮುಖ್ಯ ಬಸ್ ನಿಲ್ದಾಣದ ಬಳಿ ನಿನ್ನೆ ಮಧ್ಯರಾತ್ರಿ ಅಲ್ಪ ತೀವ್ರತೆಯ ಬಾಂಬ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಸಾವು-ನೋವು ವರದಿಯಾಗಿಲ್ಲ. ಬಸ್ ನಿಲ್ದಾಣದ ಬಳಿ ಇರುವ ಪೊಲೀಸ್ ಠಾಣೆಯನ್ನು ಗುರಿಯಾಗಿಟ್ಟುಕೊಂಡು ಉಗ್ರರು ಗ್ರೆನೇಡ್ ಎಸೆದು ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Facebook Comments

Sri Raghav

Admin