ಬ್ರೇಕಿಂಗ್ : ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ಸಸ್ಪೆಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

S-Murthy--1

ಬೆಂಗಳೂರು,ಡಿ.29-ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಎಸ್.ಮೂರ್ತಿ ನಡೆಸಿರುವ ಭ್ರಷ್ಟಾಚಾರ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಯಾಗುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಕಾರ್ಯದರ್ಶಿಯವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 2016-17ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಮಾಡಲಾದ ಖರ್ಚು-ವೆಚ್ಚಗಳಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದಿತ್ತು. ಸರ್ಕಾರದ ಬೊಕ್ಕಸಕ್ಕೆ ಸುಮಾರು 10ರಿಂದ 12 ಕೋಟಿ ಅನಗತ್ಯ ಹೊರೆಯಾಗಿದೆ ಎಂದು ಹಣಕಾಸು ಇಲಾಖೆ ಸಂಶಯ ವ್ಯಕ್ತಪಡಿಸಿತ್ತು.

ಎಸ್.ಮೂರ್ತಿ ಅವರು ವಿರುದ್ಧ ತನಿಖೆ ನಡೆಸಲು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ ನೇತೃತ್ವದ ಐವರು ಅಧಿಕಾರಿಗಳ ತಂಡ ತನಿಖೆ ನಡೆಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮತ್ತು ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ವರದಿ ನೀಡಿತ್ತು.

ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಊಟೋಪಾಚಾರ, ಪೆಂಡಾಲ್ ನಿರ್ಮಾಣ, ಸುವರ್ಣಸೌಧದ ಸುಣ್ಣಬಣ್ಣ, ಶೌಚಾಲಯ ನಿರ್ಮಾಣ, ಸೊಳ್ಳೆ ಪರದೆಗಳ ಖರೀದಿ ಸೇರಿದಂತೆ ಮತ್ತಿತರ ವೆಚ್ಚಗಳಿಗೆ 10ರಿಂದ 12 ಕೋಟಿ ವೆಚ್ಚವಾಗಿದೆ ಎಂದು ಎಸ್.ಮೂರ್ತಿ ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಎಸ್.ಮೂರ್ತಿ ನೀಡಿದ್ದ ಲೆಕ್ಕಕ್ಕೂ , ಲೆಕ್ಕ ಪರಿಶೋಧನಾ ತಂಡ ನೀಡಿದ ವರದಿಗೂ ಸಾಕಷ್ಟು ವ್ಯತ್ಯಾಸವಾಗಿದ್ದರಿಂದ ಮೂರ್ತಿಯನ್ನು ಅಮಾನತು ಮಾಡಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪೆಂಡಾಲ್ ನಿರ್ಮಾಣಕ್ಕೆ 9.32 ಕೋಟಿ, ಸುವರ್ಣ ಸೌಧಕ್ಕೆ ಸುಣ್ಣಬಣ್ಣ ಬಳಿಯಲು 2.48 ಕೋಟಿ, ಸೊಳ್ಳೆ ಪರದೆ ಬಾಡಿಗೆ 1.84 ಕೋಟಿ, ಕೆಮಿಕಲ್ ಶೌಚಾಲಯಕ್ಕೆ 2.42 ಕೋಟಿ, ಗಣ್ಯರು ಹಾಗೂ ಊಟದ ಬಿಲ್‍ಗೆ 45.48 ಲಕ್ಷ ಹಣವನ್ನು ಖರ್ಚು ಮಾಡಲಾಗಿದೆ ಎಂದು ಎಸ್.ಮೂರ್ತಿ ನೇತೃತ್ವದ ತಂಡ ಸರ್ಕಾರಕ್ಕೆ ವರದಿಯನ್ನು ಕೊಟ್ಟಿತ್ತು.

ಈ ವರದಿಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದ್ದರಿಂದ ತನಿಖೆ ನಡೆಸಲು ಹಣಕಾಸು ಇಲಾಖೆ ಸೂಚನೆ ಕೊಟ್ಟಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರ್ತಿಯವರನ್ನು ಅಮಾನತು ಮಾಡಲಾಗಿದೆ.

Facebook Comments

Sri Raghav

Admin