BREAKING : ಬಾಲಿವುಡ್ ನಟ ಖಾದರ್ ಖಾನ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Kader khan

ಟೊರೊಂಟೊ/ಮುಂಬೈ, ಜ.1-ಹಿರಿಯ ನಟ ಮತ್ತು ಖ್ಯಾತ ಚಿತ್ರ ಸಾಹಿತಿ ಖಾದರ್ ಖಾನ್(81). ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ ಸಂಜ್ರೆ ಕೆನಡಾದ ಟೊರೊಂಟೊದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ದೈಹಿಕ ಸಮತೋಲನ ಕಳೆದುಕೊಂಡು ಚಿತ್ತವೈಕಲದಿಂದ ಬಳಸುತ್ತಿದ್ದ ಅವರನ್ನು ಸೂಪ್ರಾನ್ಯೂಕ್ಲಿಯರ್ ಪಾಸ್ಲಿ ಸಮಸ್ಯೆ ಕಾಡುತ್ತಿತ್ತು. ಖಾದರ್ ಖಾನ್ ವಿಧಿವಶರಾದ ಸುದ್ದಿಯನ್ನು ಅವರ ಪುತ್ರ ಸರ್ಫರಾಝ್ ಖಚಿತಪಡಿಸಿದ್ಧಾರೆ. ಕೆನಡಾದಲ್ಲೇ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ತಂದೆ ನಮ್ಮನ್ನು ಬಿಟ್ಟು ಅಗಲಿದರು. ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ(ಕೆನಡಾ ಕಾಲಮಾನ) ನಿಧನರಾದರು. ನಿನ್ನೆ ಮಧ್ಯಾಹ್ನದಿಂದ ಅವರು ಪ್ರಜ್ಞಾಶೂನ್ಯರಾಗಿದ್ದರು. 17 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ತಮ್ಮ ತಂದೆಯ ಸಾವಿನ ವದಂತಿಗಳನ್ನು ನಿನ್ನೆಯಷ್ಟೇ ಅವರ ಪುತ್ರ ಸರ್ಫರಾಜ್ ತಳ್ಳಿಹಾಕಿದ್ದರು. ಹಿರಿಯ ನಟ ಮತ್ತು ಚಿತ್ರಸಾಹಿತಿಯೂ ಆಗಿ ಜನಪ್ರಿಯರಾಗಿದ್ದ ಖಾದರ್ ನಿಧನ ಹೊಸ ವರ್ಷದ ಸಂಭ್ರಮದಲ್ಲಿದ್ದ ಬಾಲಿವುಡ್‍ಗೆ ದು:ಖದ ಸಮಾಚಾರವಾಗಿದೆ.

ಆಫ್ಥಾನಿಸ್ತಾನದ ಕಾಬೂಲ್‍ನಲ್ಲಿ ಜನಿಸಿದ್ದ ಅವರು 1973ರಲ್ಲಿ ರಾಜೇಶ್ ಖನ್ನಾ ಅಭಿನಯದ ಧಾನ್ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಾನ್ ನಟಿಸಿದ್ದಾರೆ. ಅವರು 250ಕ್ಕೂ ಅಧಿಕ ಸಿನಿಮಾಗಳಿಗೆ ಚಿತ್ರಸಾಹಿತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪಂಚಿಂಗ್ ಡೈಲಾಗ್ ಬರೆಯುವುದರಲ್ಲಿ ಪಳಗಿದ್ದ ಖಾದರ್ ಖಳನಟ, ಪೋಷಕ ಮತ್ತು ಹಾಸ್ಯ ನಟರಾಗಿಯೂ ಗಮನಸೆಳೆದಿದ್ದರು.

1980-90ರ ದಶಕದಲ್ಲಿ ಯಶಸ್ಸಿ ಉತ್ತುಂಗದಲ್ಲಿದ್ದ ಅವರ ಆಗಿನ ಬಹುತೇಕ ಎಲ್ಲ ಹಿಂದಿ ನಟ-ನಟಿಯರೊಂದಿಗೆ ಅಭಿನಯಿಸಿದ್ಧಾರೆ. ಇವರ ಚಿತ್ರಕಥೆಗಾರರಾಗಿ ಕಾರ್ಯನಿರ್ವಹಿಸಿದ ಬಹುತೇಕ ಸಿನಿಮಾಗಳೂ ಸೂಪರ್‍ಹಿಟ್ ಆಗಿವೆ. ಶಮಾ ಎಂಬ ಚಿತ್ರವನ್ನೂ ಸಹ ಅವರು ನಿರ್ಮಿಸಿದ್ದರು.

ಬಾಪ್ ನಂಬ್ರಿ ಬೇಟಾ ದಸ್ ನಂಬ್ರಿ ಸಿನಿಮಾದಲ್ಲಿ ಖಾದರ್ ಖಾನ್ ಅಭಿನಯಮವನ್ನು ಚಿತ್ರರಸಿಕರು ಮರೆಯಲು ಸಾಧ್ಯವೇ ಇಲ್ಲ. ಈ ಚಿತ್ರದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ(ಫಿಲ್ಮ್‍ಫೇರ್ ಅವಾಡ) ಕೂಡ ಲಭಿಸಿತ್ತು. ಮಸ್ತಿ ನಹಿ ಸಾಸ್ತಿ(2017) ಅವರು ನಟಿಸಿದ ಕೊನೆ ಚಿತ್ರ.

ಹಿಂದಿ ಚಿತ್ರರಂಗಕ್ಕಾಗಿ ಇವರು ನೀಡಿ ಸಾಹಿತ್ಯ ಕೊಡುಗೆಗಾಗಿ ಇವರಿಗೆ 2013ರಲ್ಲಿ ಸಾಹಿತ್ಯ ಶೀರೋಮಣಿ ಪ್ರಶಸ್ತಿ ಲಭಿಸಿತ್ತು. ಮೇರಿ ಅವಾಜ್ ಸುನೋ ಮತ್ತು ಅಂಗಾರ್ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಫಿಲ್ಮ್ ಫ್ರೇರ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಿಮ್ಮತ್‍ವಾಲಾ, ಅಜ್ ಕಾ ದೌರ್, ಸಿಕ್ಕಾ, ಹಮ್, ಆಂಖೆ, ಮೇ ಕಿಲಾಡಿ ತು ಅನಾಡಿ, ಕೂಲಿ ನಂ.1, ದುಲೇ ರಾಜ ಮೊದಲಾದ ಸಿನಿಮಾಗಳಲ್ಲಿ ಅತ್ಯುತ್ತಮ ಹಾಸನಟರಾಗಿ ಮಿಂಚಿದ್ದರು.

# ಖಾದರ್‍ಖಾನ್ ನಿಧನಕ್ಕೆ ಗಣ್ಯಾತಿ ಗಣ್ಯರ ಶೋಕ: ಖಾದರ್‍ಖಾನ್ ನಿದನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ಧಾರೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಅನೇಕ ನಟ-ನಟಿಯರು, ಕಲಾವಿದರು, ತಂತ್ರಜ್ಞರು ಖಾನ್ ನಿಧನಕ್ಕೆ ದುಃಖಿಸಿದ್ದಾರೆ.

 

 

Facebook Comments

Sri Raghav

Admin